ಕುಂದಾಪುರ, ಮೇ 29(DaijiworldNews/AA): ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಅವರ ಹೊಸದೊಂದು ಪರಿಕಲ್ಪನೆಯ ಕಾಲುಸಂಕ ನಿರ್ಮಾಣ ಯೋಜನೆ ಅನುಷ್ಠಾನಗೊಂಡಿದೆ. ಲಾರಿ, ಬಸ್ಸಿನ ಹಳೆಯ ಚಾಸಿಸ್ ಗಳನ್ನು ಪ್ರಮುಖ ಆಧಾರವನ್ನಾಗಿ ಬಳಿಸಿ ಕಾಲುಸಂಕ ನಿರ್ಮಾಣ ಮಾಡುವ ಹೊಸ ಯೋಜನೆ ಇದೀಗ ಹೊಸಂಗಡಿ ಸಮೀಪದ ಯಡಮೊಗೆಯ ರಾಂಪೈಜೆಡ್ಡು ಎಂಬಲ್ಲಿ ಮೊದಲ ಕಾಲುಸಂಕ ನಿರ್ಮಾಣವಾಗುತ್ತಿದೆ.
ಯಡಮೊಗೆ ಗ್ರಾಮಪಂಚಾಯತ್ ನಲ್ಲಿ ರಾಂಪೈಜೆಡ್ಡು ಎನ್ನುವ ಗ್ರಾಮಾಂತರ ಪ್ರದೇಶವಿದೆ. ಇಲ್ಲಿಗೆ ಯಡಮೊಗೆ ಕುಮ್ಟೆಬೇರುವಿನಿಂದ ಬರಲು ಹೊಳೆ ಅಡ್ಡ ಬರುತ್ತದೆ. ಶತಶತಮಾನಗಳಿಂದಲೂ ರಾಂಪೈಜೆಡ್ಡುವಿಗೆ ಹೋಗಲು ಅಲ್ಲಿನ ಜನ ಕಾಲುಸಂಕ ನಿರ್ಮಾಣ ಮಾಡಿಕೊಂಡು ನದಿ ದಾಟುತ್ತಿದ್ದರು. ಅತ್ಯಂತ ವೇಗವಾಗಿ ಹರಿಯುವ ನದಿಗೆ ಸುಮಾರು 30 ಅಡಿ ಎತ್ತರದಲ್ಲಿ ಮರದ ದಿಮ್ಮಿಗಳನ್ನು ಬಳಸಿ ಕಾಲುಸಂಕ ನಿರ್ಮಾಣ ಮಾಡಿಕೊಳ್ಳುತ್ತಾರೆ. ಅಪಾಯಕಾರಿಯಾದ ಈ ಕಾಲುಸಂಕದಲ್ಲಿ ಮಳೆಗಾಲದಲ್ಲಿ ಹೋಗುವುದೇ ಒಂದು ಸವಾಲು. ಅತ್ಯಂತ ಕಷ್ಟದಲ್ಲಿ ರಾಂಪೈಜೆಡ್ಡುವಿನ ಜನ ನದಿ ದಾಟುತ್ತಿದ್ದರು. ಅನಾರೋಗ್ಯ ಪೀಡಿತರು, ಶಾಲೆಗೆ ಹೋಗುವ ಮಕ್ಕಳು ಈ ಅಪಾಯಕಾರಿ ಕಾಲುಸಂಕದಲ್ಲಿಯೇ ಕಾಲುಸಂಕ ದಾಟಿ ಬರಬೇಕಿತ್ತು.
ಶಾಸಕ ಗುರುರಾಜ ಗಂಟಿಹೊಳೆಯವರು ಚಾಸಿಸ್ ಬಳಿಸಿ ನಿರ್ಮಿಸುವ ಅಪರೂಪದ ಕಾಲುಸಂಕ ಉಡುಪಿ ಜಿಲ್ಲೆಗೆ ಮೊದಲನೇದಾಗಿ ಇದೇ ಯಡಮೊಗೆ ಗ್ರಾಮದ ರಾಂಪೈಜೆಡ್ಡುವಿನಲ್ಲಿ ನಿರ್ಮಾಣವಾಗುತ್ತಿದೆ. ಬಹುಶಃ ಇದು ರಾಜ್ಯದಲ್ಲಿಯೇ ಪ್ರಥಮ ಎನ್ನಬಹುದು.
ಸಮೃದ್ಧ ಬೈಂದೂರು ಟ್ರಸ್ಟ್ ಮತ್ತು ಬೆಂಗಳೂರು ಮೂಲದ ಅರುಣಾಚಲಂ ಟ್ರಸ್ಟ್ ಸಹಯೋಗ, ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಹಳೆಯ ಲಾರಿ ಬಸ್ಸುಗಳ ಚಾಸಿಸ್ ಬಳಸಿ ಕಡಿಮೆ ಖರ್ಚಿನಲ್ಲಿ ಕಾಲು ಸಂಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬೈಂದೂರು ಕ್ಷೇತ್ರದ 50 ಕಡೆ ಇಂತಹ ಕಾಲುಸಂಕ ನಿರ್ಮಾಣವಾಗುತ್ತಿದೆ. ಪ್ರಾರಂಭಿಕವಾಗಿ ಬೈಂದೂರು ಕ್ಷೇತ್ರದ ಮೂರು ಕಡೆ ಕಾಲುಸಂಕ ನಿರ್ಮಾಣಗೊಳ್ಳುತ್ತಿದೆ. ರಾಂಪೈಜೆಡ್ಡುವಿನಲ್ಲಿ ಈಗಾಗಲೇ ಮುಕ್ಕಾಲು ಭಾಗ ಕಾಲುಸಂಕ ನಿರ್ಮಾಣಗೊಂಡಿದೆ. 3 ಫಿಲ್ಲರ್ಗಳ ನಿರ್ಮಾಣ ಮಾಡಿ ನೇರವಾಗಿ ಚಾಸಿಸ್ಗಳನ್ನು ಅಳವಡಿಸಿ ಅದಕ್ಕೆ ಆಧಾರವಾಗಿ ಅಡ್ಡ ಪಟ್ಟಿ ಜೋಡಿಸುವ ಕೆಲಸ ಆಗಿದೆ. ಹ್ಯಾಂಗ್ಲರ್, ಫ್ಲೇಟ್ ಅಳವಡಿಕೆ ಕಾರ್ಯ ಶೀಘ್ರ ಮುಗಿಯಲಿದೆ. ಸೈಡ್ ಗಾರ್ಡ್ ಅಳವಡಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಸುಮಾರು 60 ಅಡಿಗೂ ಹೆಚ್ಚು ಉದ್ದವಾದ ಕಾಲುಸಂಕ ಇದಾಗಿದೆ. 20 ಅಡಿ ಎತ್ತರಕ್ಕೆ ಸೇತುವೆ ನಿರ್ಮಾಣ ಮಾಡಲಾಗಿದೆ.
ಹೊಳೆಯಿಂದಲೇ ಮೂರು ಫಿಲ್ಲರ್ ಗಳ ನಿರ್ಮಾಣ ಮಾಡಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಚಾಸಿಸ್ಗಳು ಬಲಿಷ್ಟವಾಗಿದ್ದು ಸುಮಾರು 8 ಕ್ವಿಂಟಾಲ್ ಗೂ ಅಧಿಕ ಭಾರವನ್ನು ಹೊರುವ ಸಾಮಾಥ್ರ್ಯವಿದೆ. ರಿಕ್ಷಾ, 810, ಸ್ಯಾಂಟ್ರೋ ಕಾರುಗಳು ಹೋಗುವಷ್ಟು ಅಗಲ ಇದ್ದರೂ ಕೂಡಾ ಕಾಲುಸಂಕದ ಸುರಕ್ಷತೆಯ ದೃಷ್ಟಿಯಿಂದ ಗ್ರಾಮಸ್ಥರು ಪಾದಚಾರಿಗಳು ಹಾಗು ದ್ವಿಚಕ್ರ ವಾಹನಗಳಿಗೆ ಅವಕಾಶ ಕೊಟ್ಟರೆ ಸಾಕು ಎನ್ನುತ್ತಾರೆ. ಅಂದರೆ ಸಂಪರ್ಕದ ಮಹತ್ವ ಇಲ್ಲಿನ ಜನ ಅರ್ಥ ಮಾಡಿಕೊಂಡಿದ್ದಾರೆ.
ಇನ್ನೊಂದು ವಾರದಲ್ಲಿ ಈ ವಿನೂತನ ಕಾಲು ಸಂಕ ಸಂಚಾರಕ್ಕೆ ಮುಕ್ತವಾಗಲಿದೆ. ರಾಂಪೈಜೆಡ್ಡುವಿನ ಜನರಲ್ಲಿ ಖುಷಿ ಮನೆಮಾಡಿದೆ. ಶಾಶ್ವತ ವಲ್ಲದಿದ್ದರೂ ತತ್ಕಾಲಿಕವಾದರೂ ಕಾಲುಸಂಕ ನಿರ್ಮಾಣವಾಯಿತಲ್ಲ ಎನ್ನುವ ಸಂತೋಷವಿದೆ. ಈಗ ಅಕಾಲಿಕವಾಗಿ ಸುರಿಯುತ್ತಿರುವ ಮುಂಗಾರುಪೂರ್ವ ಮಳೆ ಬಿಟ್ಟರೆ ವಂಡ್ಸೆ ಹಾಗೂ ತೊಂಬಟ್ಟು-ಕಬ್ಬಿನಾಲೆಯ ಕಾಲುಸಂಕಗಳ ಕಾಮಗಾರಿ ಪೂರ್ಣವಾಗುತ್ತದೆ ಎನ್ನಲಾಗುತ್ತಿದೆ.