ಮಂಗಳೂರು, ಮೇ08(Daijiworld News/SS): 2015ರ ಮಾರ್ಚ್ 7ರಂದು ನಡೆದಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ, ಕೋರ್ಟ್ ಆರೋಪಿಗಳಿಗೆ 20 ವರ್ಷ ಕಠಿಣ ಸಜೆ ಮತ್ತು 20 ಸಾವಿರ ದಂಡ ವಿಧಿಸಿದೆ.
ಮಂಗಳೂರಿನ ಎರಡನೇ ಜಿಲ್ಲಾ ಹೆಚ್ಚುವರಿ ಮತ್ತು ಪೋಕ್ಸೊ ವಿಶೇಷ ನ್ಯಾಯಾಲಯ ಈ ತೀರ್ಪನ್ನು ನೀಡಿದ್ದು, ಐಪಿಸಿ ಸೆಕ್ಷನ್ 376(ಡಿ) ಮತ್ತು ಪೊಕ್ಸೋ ಕಾಯ್ದೆ ಕಲಂ (6)ರಡಿ ಶಿಕ್ಷೆ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 376(ಡಿ) ಪ್ರಕಾರ 20 ವರ್ಷ ಕಠಿಣ ಸಜೆ ಮತ್ತು 20 ಸಾವಿರ ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 18 ಸಾವಿರ ರೂ.ನ್ನು ಸಂತ್ರಸ್ತೆಗೆ ನೀಡುವಂತೆ ಕೋರ್ಟ್ ಸೂಚಿಸಿದೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ನಿವಾಸಿ ಸಚಿನ್ಕುಮಾರ್ (22) ಮತ್ತು ಲಾಲಾ ಪಟ್ಲಾಡಿಯ ನಿವಾಸಿ ಕೆ.ಟಿ.ಮ್ಯಾಥ್ಯೂ ಯಾನೆ ಮನು (24) ಶಿಕ್ಷೆಗೊಳಗಾದವರು.
ರಿಕ್ಷಾ ಚಾಲಕನಾಗಿದ್ದ ಮ್ಯಾಥ್ಯೂ ಮತ್ತು ಕೂಲಿ ಕೆಲಸ ಮಾಡಿಕೊಂಡಿದ್ದ ಸಚಿನ್ ಪ್ರಥಮ ಪಿಯುಸಿ ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರವಾಗಿ ಅತ್ಯಾಚಾರಗೈದಿದ್ದರು. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ಬಿ.ಆರ್.ಲಿಂಗಪ್ಪ ತನಿಖೆ ಕೈಗೆತ್ತಿಕೊಂಡು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.