ಉಡುಪಿ, ಮೇ08(Daijiworld News/SS): ಇಲ್ಲಿನ ಇತಿಹಾಸ ಪ್ರಸಿದ್ಧ ಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ, ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ನಡೆದಿತ್ತು. ಈ ವೇಳೆ ಮುಸ್ಲಿಂ ಸಹೋದರರು ಹಿಂದೂ ಬಾಂಧವರಿಗೆ ಐಸ್ಕ್ರೀಂ ವಿತರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಇತಿಹಾಸ ಪ್ರಸಿದ್ಧ ಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯು ಸಂಪೂರ್ಣ ಜೀರ್ಣೋದ್ಧಾರಗೊಂಡಿದ್ದು, ವರ್ಷಾವಧಿ ರಥೋತ್ಸವ ಪೂರ್ವಭಾವಿಯಾಗಿ ಹಸಿರು ಹೊರೆ ಕಾಣಿಕೆ ಸಾಗಿಸಲಾಗುತ್ತಿತ್ತು. ಈ ಸಂದರ್ಭ ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯಿಂದ ಶ್ರೀ ಕ್ಷೇತ್ರಕ್ಕೆ ಹೊರಟ ಹಸಿರು ಹೊರೆಕಾಣಿಕೆ ಶೋಭಾಯಾತ್ರೆಯನ್ನು ಸ್ಥಳೀಯ ಮುಸ್ಲಿಂ ಬಾಂಧವರು ಸ್ವಾಗತಿಸಿದ್ದಾರೆ.
ಶಿರ್ವದ ಜಾಮೀಯಾ ಮಸೀದಿ ಬಳಿ ಮಸೀದಿಯ ಆಡಳಿತ ಮಂಡಳಿ ಮತ್ತು ಪದಾಧಿಕಾರಿಗಳು ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗಿ ಬಂದಿದ್ದ ಹಿಂದೂ ಬಾಂಧವರನ್ನು ಸ್ವಾಗತಿಸಿ, ಯಾತ್ರೆಯಲ್ಲಿ ಭಾಗವಹಿಸಿದ ಸುಮಾರು 2 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಐಸ್ಕ್ರೀಮ್ ವಿತರಿಸಿದ್ದಾರೆ.
ಈ ಮೂಲಕ ಕರಾವಳಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಮತ್ತೆ ಸೌಹಾರ್ದತೆ ಸಾಕ್ಷಿಯಾಗಿದ್ದಾರೆ.