ಉಳ್ಳಾಲ, ,ಮೇ 26 (DaijiworldNews/AK): ಬಿಲ್ಡರ್ ಓರ್ವರಿಂದ ರೂ. 86 ಲಕ್ಷ ಹಣವನ್ನು ಪಡೆದು ವಂಚಿಸಿ, ಅವರ ಲೇಔಟ್ ವ್ಯವಹಾರಕ್ಕೆ ಅಡ್ಡಿಪಡಿಸಿ, ಜೀವಬೆದರಿಕೆಯೊಡ್ಡಿರುವ ಬ್ಯಾಂಕ್ ಮ್ಯಾನೇಜರ್ ಸಹಿತ ಬ್ರೋಕರ್ , ಸಿವಿಲ್ ಗುತ್ತಿಗೆದಾರ ಹಾಗೂ ಅವರ ಸಹಚರನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಕಾಯಿದೆಗಳಡಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ್ ಜೆಪ್ಪಿನಮೊಗರು ಬಾಕಿಮಾರುವಿನ ಪವನ್ ಕುಮಾರ್, ಬ್ರೋಕರ್ ಆಗಿರುವ ಅತ್ತಾವರದ ಗುರುರಾಜ್, ಸಿವಿಲ್ ಗುತ್ತಿಗೆದಾರ ಜಗದೀಶ್ ಹಾಗೂ ಅವರ ಸಹಚರ ಜಯಪ್ರಕಾಶ್ ಜೆ.ಪಿ ಎಂಬವರುಗಳ ವಿರುದ್ಧ ಪ್ರಕರಣ ದಾಖಲಾಗಿದೆ.
2022 ನೇ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ್ ಪವನ್ಕುಮಾರ್ ಬಾಕಿಮಾರ್ ಎಂಬಾತನು ಕೇಂದ್ರ ಸರ್ಕಾರದ ಕೆಲಸದ ಜೊತೆಗೆ ಬ್ರೋಕರ್ ಮತ್ತು ಸಿವಿಲ್ ಗುತ್ತಿಗೆದಾರನಾಗಿರುವುದಾಗಿ ಹೇಳಿಕೊಂಡು ಬೆಂಗಳೂರು ಮೂಲದ ವೆಂಕಟೇಶ್ ಎಂಬವರಿಗೆ ಮಂಗಳೂರಿನ ಉಳ್ಳಾಲದ ಸೂರ್ಯಕಾಂಡ ವಿಲೇಜ್ನಲ್ಲಿ ಲೇಔಟ್ಗೆ 4 ಎಕರೆ ಜಮೀನನ್ನು ಕ್ರಯಕ್ಕೆ ಕೊಡಿಸಿದ್ದರು. ಮಾಲೀಕರು ಸದರಿ ಜಮೀನಿನಲ್ಲಿ ವಿಂಗಡಿಸಿದ ಲೇಔಟ್ಗೆ ತಾನೇ ಡ್ರೈನೇಜ್ ಕೆಲಸ ಮಾಡಿಕೊಡುವುದಾಗಿ ಮತ್ತು ದಾಖಲಾತಿಗಳನ್ನು ಒದಗಿಸಲು ಮಾಲೀಕರಿಂದ ಖುದ್ದು ಒಪ್ಪಿಗೆ ಪಡೆದಿದ್ದು ನಂತರ ಡ್ರೈನೇಜ್ ಉಪಗುತ್ತಿಗೆಯನ್ನು ಜಗದೀಶ್ ಎಂಬಾತನಿಗೆ ಕೊಟ್ಟು ಕಳಪೆ ಕಾಮಗಾರಿಯನ್ನು ಮಾಡಿಸಿದ್ದು ಅಲ್ಲದೆ ಉಪಗುತ್ತಿಗೆದಾರನ ಹೆಸರಿನಲ್ಲಿ ಆರ್ಟಿಜಿಎಸ್ ಮತ್ತು ನಗದು ಮೂಲಕ ಆತನೇ ಮಾಲಿಕರಿಂದ 86 ಲಕ್ಷ ಹಣ ಪಡೆದಿದ್ದು ಕೆಲಸ ಮಾಡದೆ ನಂಬಿಕೆ ದ್ರೋಹವೆಸಗಿ ವಂಚಿಸಿ ಮೋಸ ಮಾಡಿದ್ದಾರೆ ಎಂದು ದೂರಲಾಗಿದೆ.
ತದನಂತರ ಮ್ಯಾನೇಜರ್ ಗೆ ಮಾಲೀಕರು ಲೇಔಟ್ನಲ್ಲಿ ವಿಂಗಡಿಸಿದ ಸೈಟುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭಮಾಡಿಕೊಳ್ಳಲು ಕೊಡಲಿಲ್ಲವೆಂಬ ಕಾರಣದಿಂದ ಮತ್ತು ಮಾಲಿಕರಿಂದ ತೆಗೆದುಕೊಂಡ ಹಣವನ್ನು ವಾಪಾಸ್ಸು ಕೊಡುವಂತೆ ಕೇಳಿದ್ದಕ್ಕೆ ಮಾಲೀಕರ ಮೇಲೆ ಜಿದ್ದು ಮತ್ತು ದ್ವೇಷವನ್ನು ಸಾದಿಸುತ್ತ ಜ. 11 ರಂದು ಮಧ್ಯಾಹ್ನ 3-00 ಗಂಟೆಗೆ ಪವನ್ ಕುಮಾರ್ನು ತನ್ನ ಸಹಚರ ಬೋಕರ್ಗಳಾದ ಮಂಗಳೂರಿನ ಎಂಪೈರ್ಮಾಲ್ನಲ್ಲಿರುವ ಎವರ್ಗ್ರೀನ್ ಸೊಲ್ಯೂಷನ್ಸ್ ಮಾಲಿಕ ಗುರುರಾಜ್ ಮತ್ತು ಜಯಪ್ರಕಾಶ್, ಉಪಗುತ್ತಿಗೆದಾರ ಜಗದೀಶ್, ಎಂಬವರೊಂದಿಗೆ ಲೇಔಟ್ಗೆ ಅಕ್ರಮ ಪ್ರವೇಶ ಮಾಡಿ ಕೆಲಸದ ಮೇಲಿದ್ದ ಪುಷ್ಪರಾಜ್, ದಕ್ಷರಾಜ್, ರಾಧಾಕೃಷ್ಣರವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಕೆಲಸಕ್ಕೆ ತಡೆವೊಡ್ಡಿ ಹಿಡಿದು ಹಲ್ಲೆ ನಡೆಸಿ ಮಾರಕ ಆಯುಧಗಳಾದ ಪಿಕ್ಕಾಸು, ರಾಡು, ಹಾರೆಯನ್ನು ತೋರಿಸಿ ಹೆದರಿಸಿ ಜೆಸಿಬಿ ಮತ್ತು ಟ್ರಕ್ ನ್ನು ಹತ್ತಿಸಿ ಕೊಲೆಮಾಡುವುದಾಗಿ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ.
ಪವನ್ ಕುಮಾರ್ರವರಿಗೆ ನ್ಯಾಯ ವಿಚಾರಿಸಿದರೆ ಸುಳ್ಳು ಹೇಳುತ್ತಾ ಉಡಾಫೆ ಹಾಗು ದೌರ್ಜನ್ಯದಿಂದ ವರ್ತಿಸಿದ್ದು,ಈ ಘಟನೆಯ ಸಂಬಂದವಾಗಿ ಆರೋಪಿಗಳಾದ ಬ್ಯಾಂಕ್ ಅಧಿಕಾರಿ ಪವನ್ ಕುಮಾರ್ ಇತರೆ 3 ಜನರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೈಂ.ನಂ. 98/2024 ಕಲಂ, 341,447,323,504,506,420 ಜೊತೆಗೆ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿಸಿದ್ದಾರೆ
ಈ ಪ್ರಕರಣವು ಬ್ಯಾಂಕ್ ಶಾಖೆಯ ಬೆಳಕಿಗೆ ಬರುತ್ತಿದ್ದಂತೆ ಪ್ರಬಂಧಕರಾಗಿದ್ದ ಬ್ಯಾಂಕ್ ಮೇನೇಜರ್ ಪವನ್ ಕುಮಾರ್ ಎಂಬಾತನನ್ನು ಕಾರವಾರಕ್ಕೆ ವರ್ಗಾವಣೆ ಆದೇಶ ಮಾಡಿದ್ದಾರೆ.