ಉಡುಪಿ, ಮೇ 27 (DaijiworldNews/AA): ಹಳಿಯಲ್ಲಿ ವೆಲ್ಡಿಂಗ್ ಜಾಯಿಂಟ್ ಬಿಟ್ಟಿರುವುದನ್ನು ಸಕಾಲದಲ್ಲಿ ಪತ್ತೆ ಮಾಡಿದ ಸಿಬ್ಬಂದಿಯೊಬ್ಬರು ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತಂದ ಪರಿಣಾಮ ಸಂಭವನೀಯ ಭಾರೀ ಅನಾಹುತ ತಪ್ಪಿದೆ.
ರೈಲ್ವೆ ಜಾಗೃತ ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಅವರು ಶನಿವಾರ ತಡರಾತ್ರಿ ಉಡುಪಿಯ ಇನ್ನಂಜೆ ಮತ್ತು ಪಡುಬಿದ್ರಿ ನಡುವಿನ ರೈಲ್ವೇ ಹಳಿ ಜಾಯಿಂಟ್ ಬಿಟ್ಟಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರು ಉಡುಪಿಯ ಆರ್ಎಂಇ ಗಮನಕ್ಕೆ ತಂದಿದ್ದಾರೆ. ಬಳಿಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಹಳಿಯನ್ನು ದುರಸ್ತಿಗೊಳಿಸಿದ್ದಾರೆ.
ರೈಲ್ವೇ ಹಳಿಯ ದುರಸ್ತಿ ಕಾರ್ಯದಿಂದಾಗಿ ಹಲವು ರೈಲುಗಳ ಸಂಚಾರ ವ್ಯತ್ಯಯವಾಗಿದೆ. ಹಾಗೂ ರೈಲುಗಳನ್ನು ಉಡುಪಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ಕೆಲಹೊತ್ತು ನಿಲ್ಲಿಸಲಾಯಿತು. ಈ ಸಮಯದಲ್ಲಿ ಉಡುಪಿಯಿಂದ ಮುಂಜಾನೆ 3 ಗಂಟೆಗೆ ಮಂಗಳೂರು ಜಂಕ್ಷನ್ ಕಡೆಗೆ ಹೊರಡಬೇಕಿದ್ದ ಎಲ್ಟಿಟಿ-ತಿರುವನಂತಪುರಂ ಸೆಂಟ್ರಲ್ ನೇತ್ರಾವತಿ ಎಕ್ಸ್ ಪ್ರೆಸ್ ರೈಲನ್ನು ಇನ್ನಂಜೆಯಲ್ಲಿ, ಮುಂಜಾನೆ 4 ಗಂಟೆ ಸುಮಾರಿಗೆ ಹಾದು ಹೋಗಬೇಕಿದ್ದ ಕೆಎಸ್ಆರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್ ಪ್ರೆಸ್ ಎರಡೂ ರೈಲುಗಳನ್ನು ರೈಲು ಹಳಿ ದುರಸ್ತಿಯಾಗುವವರೆಗೂ ತಡೆಹಿಡಿಯಲಾಗಿತ್ತು.
ಇನ್ನು ತಾಪಮಾನದಲ್ಲಿನ ದಿಢೀರ್ ಕುಸಿತದಿಂದ ಕೆಲವೊಮ್ಮೆ ವೆಲ್ಡಿಂಗ್ ಜಾಯಿಂಟ್ ಬಿಟ್ಟುಕೊಳ್ಳುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕ ಬಿ ಬಿ ನಿಕಮ್ ತಿಳಿಸಿದ್ದರೆ. ಇನ್ನು ಜಾಗೃತ ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಅವರ ಕರ್ತವ್ಯವನ್ನು ಮೆಚ್ಚಿ ಕೊಂಕಣ ರೈಲ್ವೆ 25 ಸಾವಿರ ರೂ. ನಗದು ಬಹುಮಾನ ಘೋಷಣೆ ಮಾಡಿದ್ದು, ರೈಲ್ವೇ ದುರಸ್ತಿ ವೇಳೆಯೇ ಬಹುಮಾನದ ಚೆಕ್ ಹಸ್ತಾಂತರಿಸಲಾಯಿತು.