ಕೋಟ, ಮೇ 26 (DaijiworldNews/AK): ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ಸಮರ್ಥವಾಗಿ ವಿರೋಧಿಸಿದ ಬುದ್ಧ, ಸಾವಿತ್ರಿ ಬಾಯಿ ಪುಲೆ, ಅಂಬೇಡ್ಕರ್ ಹೋರಾಡಿ, ಜಾತಿವಾದಿಗಳ, ವೈದಿಕ ಕರ್ಮಟಗಳ ವಿರುದ್ಧ ಹೋರಾಡಿ ದಲಿತರಿಗೆ ಅಸ್ಫೃಶ್ಯತೆಯಿಂದ ಬಳಲುತ್ತಿದ್ದ ಸಮುದಾಯಗಳಿಗೆ ಶಿಕ್ಷಣ ಹಕ್ಕನ್ನು ಕೊಟ್ಟವರು. ಅವರ ಆದರ್ಶಗಳನ್ಬು ನಾವು ಅನುಸರಿಸಬೇಕಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) (ಅಂಬೇಡ್ಕರ್ ವಾದ) ಬೆಂಗಳೂರು ಇದರ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ಅವರು ಭಾನುವಾರ ಕೋಟ ಸಿ.ಎ ಬ್ಯಾಂಕ್ ಪ್ರಧಾನ ಕಛೇರಿಯ ಬಿ.ಸಿ. ಹೊಳ್ಳ ಸಹಕಾರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ,) ಕೋಟ ಹೋಬಳಿ ಶಾಖೆ ಹಮ್ಮಿಕೊಂಡ 25ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ "ಅಕ್ಷರದಕ್ಕರೆ - 2024" (ಎದೆಗೆ ಬೀಳಲಿ... ಅಕ್ಷರ) ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಶಿಕ್ಷಣ ಭ್ರಷ್ಟಾಚಾರದಿಂದಾಗಿ, ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಿಯಿಂದಾಗಿ ಸರ್ಕಾರೀ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಆದರೂ ಬದಿಗೊತ್ತಲ್ಪಟ್ಟ ಸಮಯದಾಯವೇ ಇರುವ ಸರ್ಕಾರೀ ಶಾಲೆಗಳ ವಿದ್ಯಾರ್ಥಿಗಳು ಇದೀಗ ಅತೀ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದಾರೆ. ಹಾಗಾಗಿ ಸರ್ಕಾರೀ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು.
ಶಿಕ್ಷಣದ ಮೂಲಕ ಬೆಳೆದು ಅಸ್ಪೃಶ್ಯತೆ ನಿವಾರಣೆಯ ಪಣ ತೊಟ್ಟು ದಲಿತ ಸಮುದಾಯಗಳನ್ನು ಸಮಾನತೆಯತ್ತ ಕೊಂಡೊಯ್ಯುವಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಕಿಕೊಟ್ಟ ದಾರಿ ನಮಗೆಲ್ಲ ಆದರ್ಶ ಎಂದು ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದ ಗೀತಾ ಪೌಂಡೇಶನ್ ಕೋಟ ಮಣೂರು ಇದರ ಪ್ರವರ್ತಕ ಆನಂದ ಸಿ ಕುಂದರ್ ಹೇಳಿದರು.
ಕಳೆದ 25 ವರ್ಷಗಳಿಂದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕೋಟ ಹೋಬಳಿ ಶಾಖೆಯ ಕಳೆದ 25 ವರ್ಷಗಳ ಸಾಧನೆ ಹಾಗೂ ನಡೆದು ಬಂದ ದಾರಿಯನ್ನು ವಕೀಲ, ಜಿಲ್ಲಾ ಸಂ. ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಪ್ರಾಸ್ತಾವಿಸಿ ಮಾತನಾಡಿದರು.
ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟ ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ಡಾ| ಕೆ. ಕೃಷ್ಣ ಕಾಂಚನ್ ಅವರನ್ನು, ಯಕ್ಷಗಾನ ಭಾಗವತ ನವೀನ್ ಕೋಟ, ಡಾನ್ಸ್ ಕರ್ನಾಟಕ ಡಾನ್ಸ್ ಗೆ ಪ್ರವೇಶ ಪಡೆದ ನಿಖಿತಾ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ, ಪಿ.ಯುಸಿ ಹಾಗೂ ಪದವಿ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಉಡುಪಿ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್, ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್ ಕುಮಾರ್, ರಾಜ್ಯ ಸಮಿತಿ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಜಿಲ್ಲಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ವಾಸುದೇವ ಮುದೂರು, ಎನ್.ಎ. ನೇಜಾರು, ವಿವಿಧ ತಾಲೂಕುಗಳ ಸಂಚಾಲಕರಾದ ಕೆ.ಸಿ ರಾಜು ಬೆಟ್ಟನಮನೆ, ನಾಗರಾಜ ಉಪ್ಪುಂದ, ಶ್ರೀನಿವಾಸ ವಡ್ಡರ್ಸೆ, ಮಂಜುನಾಥ ನಾಗೂರು, ಸುರೇಶ ಹಕ್ಲಾಡಿ, ನಾಗರಾಜ ಸಟ್ವಾಡಿ, ಸುರೇಶ ಮೂಡುಬಗೆ, ಚಂದ್ರಶೇಖರ ಕೂರ್ಗಿ, ಪ್ರಭಾಕರ ಮಲೂರು, ಗಣೇಶ ಕಾರ್ತಟ್ಟು, ರವಿ ಹರ್ತಟ್ಟು. ಉಮೇಶ ಕೋಟತಟ್ಟು. ಕೃಷ್ಣ ಗಂಡಕೆರೆ, ಐತ ಕಾರ್ಕಡ, ಕರುಣಾಕರ ಕೆದೂರು. ಚೈತ್ರಾ ಮಣೂರು, ಸ್ವಪ್ಪಾ ರತ್ನಾಕರ ಮಧುವನ, ಸಕೇಶ ಉಪ್ಲಾಡಿ, ಗೋಪಾಲ ಗಿಳಿಯಾರು, ವಾಸುದೇವ ಗುಳ್ಳಾಡಿ, ಉಮೇಶ ಪಡುಕರೆ. ಮಹೇಶ ಕಾರ್ಕಡ, ಕುಸುಮ ಕಟ್ಕೆರೆ ಗಣೇಶ ಮಾಣಿಕಟ್ಟು. ಮಂಜುನಾಥ ಮಧುವನ, ಜೋಗಿ ಹೆಗ್ಗುಂಜೆ, ನಾಗೇಶ ಪಡುಕರೆ ಮೊದಲಾದವರು ಉಪಸ್ಥಿತರಿದ್ದರು.
ಕೋಟ ಹೋಬಳಿ ಶಾಖೆಯ ಸಂಚಾಲಕ ನಾಗರಾಜ ಪಡುಕೆರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ಯಾಮಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು. ಅಕ್ಷರದಕ್ಕರೆಯ ಮಹತ್ವವನ್ನು ವಿವರಿಸಿದರು. ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ ವಂದಿಸಿದರು. ಉಪನ್ಯಾಸಕರಾದ ಮಂಜುನಾಥ ಕೆ.ಎಸ್., ನಾಗರಾಜ ಗುಳ್ಳಾಡಿ, ಅದ್ಯಾಪಕ ಸಂತೋಷ ಕುಮಾರ್ ಪಡುಕೆರೆ ನಿರ್ವಹಿಸಿದರು.