ಮಂಗಳೂರು,ಮೇ 08 (Daijiworld News/MSP): ಕೂಸು ಹುಟ್ಟೋ ಮುಂಚೆ ಕುಲಾವಿ ಹೊಲಿಸಲು ಸಿದ್ದರಾದಂತೆ ಫಲಿತಾಂಶ ಬರೋ ಮುಂಚೆಯೇ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ಭರವಸೆಯಲ್ಲಿ ಸಂಭ್ರಮಾಚರಣೆಗೆ ಯಕ್ಷಗಾನ ಮುಂಗಡವಾಗಿ ಕಾಯ್ದಿರಿಸಲಾಗಿದೆ.
ಹೌದು ದೇಶದಲ್ಲಿ ಈಗಾಗಲೇ ಐದು ಹಂತದ ಚುನಾವಣೆ ಮಾತ್ರ ನಡೆದಿದೆ. ಇನ್ನು ಎರಡು ಹಂತದ ಚುನಾವಣೆ ನಡೆಯಬೇಕಿದೆ. ಆದರೆ ಮಂಗಳೂರಿನಲ್ಲಿ 'ನಮೋ ಎಗೈನ್, ನಮೋ ಫಿರ್ಸೇ, ಟೀಮ್ಮೋದಿ, ನಮೋ ಮಿಷನ್400 ಪ್ಲಸ್' ಟೀಮ್ ಗಳು ದೇಶಾದ್ಯಂತ ಬಿಜೆಪಿ ಭರ್ಜರಿಯಾಗಿ ಬಹುಮತ ಗಳಿಸಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೆ ಏರುತ್ತಾರೆ ಎಂಬ ಅತಿಯಾದ ವಿಶ್ವಾಸದಲ್ಲಿ ಯಕ್ಷಗಾನ ಬುಕ್ಕಿಂಗ್ ಮಾಡಿದೆ.
" ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದಿಂದ ಮೇ.24 ರಂದು ರಾತ್ರಿ 8:30ಕ್ಕೆ ಮಂಗಳೂರಿನ ರಥಬೀದಿಯಲ್ಲಿ "ಶ್ರೀ ದೇವಿ ಮಹಾತ್ಮ್ಯಂ" ಎಂಬ ಪುಣ್ಯ ಕಥಾ ಪ್ರಸಂಗ ನಡೆಯಲಿದೆ. ಚೌಕಿ ಪೂಜೆಯ ಬಳಿಕ ಅನ್ನಪ್ರಸಾದವೂ ನಡೆಯಲಿದೆ" ಎಂದು ಯಕ್ಷಗಾನ ಆಮಂತ್ರಣ ಪತ್ರಿಕೆ ಮುದ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಮಾತ್ರವಲ್ಲದೆ ನರೇಂದ್ರ ಭಾರತದ ಸಂಕಲ್ಪ ಈಡೇರಿದ ಸಂಭ್ರಮಾಚರಣೆಗೆ ಮತ್ತು ತಾಯಿ ದುರ್ಗಾಪರಮೇಶ್ವರಿಗೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಮೇ 23 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು ಅದರ ಮಾರನೇ ದಿನವೇ ಯಕ್ಷಗಾನ ಆಯೋಜಿಸಲಾಗಿದೆ. ವಿಶೇಷ ಎಂದರೆ ಕಟೀಲು ಮೇಳದ ತಿರುಗಾಟ ಮೇ 25 ಕೊನೆಯಾಗಲಿದೆ.