ಮಂಗಳೂರು/ಉಡುಪಿ, ಮೇ 26 (DaijiworldNews/AA): ಇದೀಗ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ಮಳೆಯಿಂದಾಗಿ ಸಮುದ್ರದ ನೀರಿನ ಮಟ್ಟ ಹಾಗೂ ಸೆಳೆತ ಹೆಚ್ಚಾಗಿರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಬೀಚ್ ಗಳಿಗೆ ಭೇಟಿ ನೀಡುವ ಪ್ರವಾಸಿಗರ ರಕ್ಷಣೆಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಸಮುದ್ರದಲ್ಲಿ ಗೃಹರಕ್ಷಕ ದಳದ 26 ಪರಿಣಿತ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಸಮುದ್ರ ಪ್ರಕ್ಷುಬ್ಧಗೊಂಡಿರುವುದನ್ನ ಗಮನಿಸದೆ ಬೇರೆ ಬೇರೆ ಕಡೆಗಳಿಂದ ಬರುವ ಪ್ರವಾಸಿಗರು ಸೇರವಾಗಿ ನೀರಿಗೆ ಇಳಿಯುತ್ತಾರೆ. ಇದರಿಂದ ಅವರ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರವಾಸಿಗರಿಗೆ ಮಾಹಿತಿ ನೀಡಲು ಹಾಗೂ ಸಮುದ್ರಕ್ಕಿಳಿಯದಂತೆ ಎಚ್ಚರಿಸಲು ಗೃಹರಕ್ಷಕ ಸಿಬ್ಬಂದಿ ನೇಮಕ್ಕೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲಾ ಗೃಹರಕ್ಷಕ ಇಲಾಖೆ ಸಿದ್ಧತೆ ನಡೆಸಿಕೊಂಡಿದೆ.
ಈ ಗೃಹರಕ್ಷಕ ಸಿಬ್ಬಂದಿಗಳು ಈಜು ಪರಿಣತಿಯೊಂದಿಗೆ ಪ್ರಥಮ ಚಿಕಿತ್ಸೆ ನೀಡುವುದನ್ನು ತಿಳಿದಿರುತ್ತಾರೆ. ಸಮುದ್ರದಲ್ಲಿ ಎಚ್ಚರಿಕೆಯ ಫಲಕವನ್ನು ಅಳವಡಿಸಲಾಗುತ್ತದೆ. ಜೊತೆಗೆ ಪ್ರವಾಸಿಗರ ರಕ್ಷಣೆಗಾಗಿ ಟ್ಯೂಬ್, ಪ್ರಕ್ಷುಬ್ಧ ಬೀಚ್ ಸ್ಥಳದಲ್ಲಿ ಹಗ್ಗಕಟ್ಟಿ ಕೆಂಪು ಪಟ್ಟಿ ಹಾಕಲಾಗುತ್ತದೆ. ಇನ್ನು ಗೃಹರಕ್ಷಕ ಸಿಬ್ಬಂದಿಗೆ ಹ್ಯಾಂಡ್ ಮೈಕ್ ಅನ್ನು ನೀಡಲಾಗುತ್ತದೆ.
ಸೋಮೇಶ್ವರ, ಉಳ್ಳಾಲ, ತಣ್ಣೀರು ಬಾವಿ, ಸುರತ್ಕಲ್, ಸಸಿಹಿತ್ಲು ಸಹಿತ ಪ್ರಮುಖ 8 ಬೀಚ್ ಗಳಲ್ಲಿ ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಎರಡು ಹಂತದಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಈ ಸಿಬ್ಬಂದಿಗಳಿಗೆ ಸಮವಸ್ತ್ರಗಳನ್ನು ನೀಡಲಾಗುತ್ತಿದ್ದು, ಇದು ಕಾನೂನು ಪ್ರಕಾರ ಎಚ್ಚರಿಸಿ ಮುಂಜಾಗ್ರತೆ ವಹಿಸಲು ಸಹಕಾರಿಯಾಗಲಿದೆ.