ಕಾರ್ಕಳ, ಮೇ 26 (DaijiworldNews/AA): ಮೊದಲ ಮಳೆಗೆ ಕಾರ್ಕಳದ ಮಿಯ್ಯಾರು ಕಾಜರ್ ಬೈಲ್ ಎಂಬಲ್ಲಿ ನಿರ್ಮಿಸಿದ ತಡೆಗೋಡೆ ಕುಸಿದುಬಿದ್ದಿದ್ದು, ಕಾರ್ಕಳದಿಂದ ಮಾಳ ಎಸ್.ಕೆ ಬಾರ್ಡರ್ ತನಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಹಲವು ಲೋಪದೋಷ ಎದ್ದುಕಾಣುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ನೆಪದಲ್ಲಿ ಕೇವಲ ಹೆದ್ದಾರಿ ನಿರ್ಮಾಣಕ್ಕೆ ಮಾತ್ರ ಒತ್ತು ನೀಡಲಾಗಿದೆ. ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇನ್ನೂ ನಿರ್ಮಾಣಕ್ಕೆ ಮುಂದಾಗದೇ ಹೋದುದರಿಂದ ಹೊಸ ಹೊಸ ಸಮಸ್ಯೆಗಳು ಎದುರಾಗಿದೆ. ಕಾರ್ಕಳದದಿಂದ ಬಜಗೋಳಿಯವರೆಗೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲೆಗಳ ಕೆಲ ಭಾಗಗಳಲ್ಲಿ ಮಳೆ ನೀರು ನಿಂತುಕೊಂಡಿದೆ. ಘನ ಹಾಗೂ ಲಘು ವಾಹನಗಳು ರಸ್ತೆಯ ಬದಿಗೆ ಹೋದರೆ ಅಪಾಯಗಳು ಎದುರಾಗಲಿದೆ. ರಾತ್ರಿಹೊತ್ತಿನಲ್ಲಿ ವಿದ್ಯುತ್ ಬೆಳಕು ಇಲ್ಲದೇ ಹೋಗಿರುವುದು ಹಾಗೂ ಸಮರ್ಪಕ ಸೂಚನಾ ಫಲಕಗಳು ಇಲ್ಲದೇ ಇರುವುದು ನಾನಾ ದುರ್ಘಟನೆಗಳಿಗೆ ಕಾರಣವಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪದ ರಸ್ತೆಯನ್ನಾಗಿ ನಿರ್ಮಿಸಿದ ಸಂದರ್ಭದಲ್ಲಿ ತಗ್ಗುಪ್ರದೇಶಗಳಿಗೆ ಮಣ್ಣು ತುಂಬಿಸಿದ್ದು, ಆ ಭಾಗವನ್ನು ದೃಢ ಪಡಿಸದ ಹಿನ್ನೆಲೆ ರಸ್ತೆಯ ಕೆಲ ಭಾಗಗಳಲ್ಲಿ ಬಿರುಕು ಬೀಳಲು ಕಾರಣ ಎನ್ನಲಾಗಿದೆ. ಗುತ್ತಿಗೆದಾರರ ನಿರ್ಲಕ್ಷದಿಂದ ಕೂಡಿದ ಕಾಮಗಾರಿ, ಅವಯಜ್ಙಾನಿಕ ರೀತಿಯ ತಡೆಗೋಡೆ, ಕಾರ್ಮಿಕರ ಕೊರತೆ, ತಾಂತ್ರಿಕ ವಿಭಾಗಗಳ ಕೊರತೆ ಎದ್ದು ಕಾಣುತ್ತಿದೆ. ಜೊತೆಗೆ ರಸ್ತೆ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಬಳಸದೇ ಇರುವುದು ಗಮನಕ್ಕೆ ಬಂದಿದೆ. ಇಂತಹ ಹಲವು ವೈಪಲ್ಯಗಳಿಗೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.