ಮಂಗಳೂರು, ಮೇ.25 (DaijiworldNews/AA): ಸೈಬರ್ ವಂಚಕರು ರಿಮೋಟ್ ಆಕ್ಸೆಸ್ ಟೂಲ್ಗಳನ್ನು ಬಳಸಿಕೊಂಡು ಎಪಿಕೆ ಫೈಲ್ ಅಥವಾ ಆಂಡ್ರಾಯ್ಡ್ ಆಪ್ ಸಿದ್ಧಪಡಿಸುತ್ತಾರೆ. ಬಳಿಕ ವಾಟ್ಸಾಪ್ ಮೆಸೇಜ್ ಮುಖಾಂತರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗಳಿಗೆ ಕಳುಹಿಸಿ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ದೋಚುತ್ತಿದ್ದಾರೆ.
ವಂಚಕರು ವಾಟ್ಸಾಪ್ ನಲ್ಲಿ ಕಳುಹಿಸಿದ ಎಪಿಕೆ ಫೈಲ್ ಮೆಸೇಜ್ ಅನ್ನು ಓಪನ್ ಮಾಡಿದಲ್ಲಿ ನಮ್ಮ ಮೊಬೈಲ್ ಗೆ ಬರುವ ಎಲ್ಲಾ ಮೆಸೇಜ್ ಗಳು ವಂಚಕರ ಮೊಬೈಲ್ ಗಳಿಗೆ ತಾನಾಗಿಯೇ ಹೋಗುತ್ತವೆ. ಆ ಮೂಲಕ ವಂಚಕರು ನಮ್ಮ ಮೊಬೈಲ್ ನಂಬರ್ ಗೆ ಬರುವ ಒಟಿಪಿ ಪಡೆದುಕೊಂಡು ಬ್ಯಾಂಕ್ ಖಾತೆಗಳಿಗೆ ಇಂಟರ್ ನೆಟ್ ಮೊಬೈಲ್ ಬ್ಯಾಂಕಿಗ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳುತ್ತಾರೆ. ಆ ಬಳಿಕ ನಮ್ಮ ಖಾತೆಯಲ್ಲಿನ ಸಂಪೂರ್ಣ ಹಣವು ಕ್ಷಣ ಮಾತ್ರದಲ್ಲಿ ಅವರ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳಿ ಹೆಚ್ಚಾಗಿವೆ ಎಂದು ಮಂಗಳೂರು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಈ ರೀತಿಯ ವಂಚನೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಕೆಲ ಮಾರ್ಗಗಳನ್ನು ಕೂಡ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ ವಾಟ್ಸಾಪ್ ಅಥವಾ ಮೊಬೈಲ್ ನಂಬರ್ ಗೆ ಬರುವ ಸಂದೇಶದ ಮುಖಾಂತರ ಬರುವ ಎಪಿಕೆ ಫೈಲ್ ಅಥವಾ ಆಂಡ್ರಾಯ್ಡ್ ಆಪ್ ಗಳ ಲಿಂಕ್ ಗಳನ್ನು ಕ್ಲಿಕ್ ಮಾಡಬಾರದು.
- ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಇಸ್ಟಾಲ್ ಅನೋನ್ ಆಪ್ಸ್ ನ್ನು ಡಿಸೇಬಲ್ ಮಾಡಬೇಕು.
- ಒಂದು ವೇಳೆ ಗೊತ್ತಾಗದೇ ಅಂತಹ ಲಿಂಕ್ ಗಳನ್ನು ಕ್ಲಿಕ್ ಮಾಡಿದಲ್ಲಿ ತಕ್ಷಣ ತಮ್ಮ ಮೊಬೈಲ್ ಅನ್ನು ಎರೋಪ್ಲೇನ್ ಮೋಡ್ ಗೆ ಹಾಕಿ ಅಥವಾ ಸ್ವಿಚ್ ಆಫ್ ಮಾಡಬೇಕು. ಬಳಿಕ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಖಾತೆಯನ್ನು ಸ್ಥಗಿತಗೊಳಿಸಬೇಕು.
- ಒಂದು ವೇಳೆ ನಿಮ್ಮ ಖಾತೆಯಿಂದ ಹಣವು ವರ್ಗಾವಣೆಗೊಂಡಿದ್ದಲ್ಲಿ ಸೈಬರ್ ಕ್ರೈಮ್ ಸಹಾಯವಾಣಿ 1930ಗೆ ಕರೆ ಮಾಡಿ ದೂರು ದಾಖಲಿಸಬೇಕು