ಬಂಟ್ವಾಳ, ಮೇ 25 (DaijiworldNews/AA): ಕಲ್ಲಡ್ಕದ ಫ್ಲೈಓವರ್ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಸಾಕಷ್ಟು ಕಾಲವಿದೆ. ಈ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಮಳೆ ಬಂದ ಕೂಡಲೇ ರಸ್ತೆಯು ಹೊಳೆಯಾಗಿ ಬದಲಾಗುತ್ತದೆ. ಹೀಗಾಗಿ ರಸ್ತೆಯಲ್ಲಿ ಪಾದಾಚಾರಿಗಳಿಗೆ ನಡೆದುಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದರೆ ಇನ್ನೊಂದೆಡೆ ದ್ವಿಚಕ್ರ ವಾಹನ ಸವಾರರಿಗೆ ಕೆಸರಾಭಿಷೇಕವಾಗುತ್ತಿದೆ.
ಕಲ್ಲಡ್ಕದಲ್ಲಿ ಸುಮಾರು ಎರಡು ಕಿ.ಮೀ. ದೂರದ ಷಟ್ಪಥ ಫ್ಲೈಓವರ್ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಳ್ಳುವಷ್ಟರಲ್ಲಿ ಕಲ್ಲಡ್ಕದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ನಡೆದುಕೊಂಡು ಹೋಗುವವರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕಾದ ಕಾರ್ಯ ಆಗಬೇಕಾಗಿದೆ. ಕೆಲದಿನಗಳ ಹಿಂದೆ ಸಹಾಯಕ ಕಮೀಷನರ್ ಹಾಗೂ ತಹಸೀಲ್ದಾರ್ ಇಲ್ಲಿಗೆ ಭೇಟಿ ನೀಡಿ ಸುರಕ್ಷತೆ ಕ್ರಮ ಹಾಗೂ ನೀರು ಹರಿದುಹೋಗಲು ಜಾಗ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶಿಸಿದ್ದರು. ಆದರೆ ಈಗ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದ್ದು, ನೀರೆಲ್ಲಾ ಕೆಸರಾಗಿ ಮಾರ್ಪಟ್ಟಿದೆ. ಪರಿಣಾಮ ಜನರು ಈ ಕೆಸರಿನ ಗುಡ್ಡೆಯಲ್ಲಿ ದಿನನಿತ್ಯ ಸಂಚರಿಸುವಂತಾಗಿದೆ.
ಈ ಕೆಸರು ನೀರಿನಿಂದಾಗಿ ವಾಹನ ಸವಾರರ ಮೈಯೆಲ್ಲಾ ಕೆಸರಾಭಿಷೇಕವಾಗುತ್ತಿದೆ. ಇದು ಅವರ ಪ್ರಯಾಣದ ಹಕ್ಕನ್ನು ಕಸಿದುಕೊಂಡಂತೆ. ದ್ವಿಚಕ್ರ ವಾಹನ ಸವಾರರು ಸುರಕ್ಷಿತವಾಗಿ ವಾಹನ ಚಲಾಯಿಸಲು ಕಲ್ಲಡ್ಕ ರೋಡ್ ಯೋಗ್ಯವಲ್ಲ ಎಂಬಂತಾಗಿದೆ. ಇನ್ನು ಪಾದಚಾರಿಗಳು ಚಪ್ಪಲಿಯನ್ನು ಕೈಯಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಜೊತೆಗೆ ಮಂಗಳೂರು ಬೆಂಗಳೂರು ಸಂಪರ್ಕದ ಪ್ರಮುಖ ಮಾರ್ಗವಾದ ಕಲ್ಲಡ್ಕದಲ್ಲಿ ಸಿಂಗಲ್ ರೋಡ್ ಕೂಡ ಟ್ರಾಫಿಕ್ ಜಾಮ್ ಆಗುತ್ತಿದೆ.
ಇನ್ನೇನು ಶಾಲೆಗಳು ಆರಂಭಗೊಳ್ಳುವ ಹೊತ್ತಿನಲ್ಲಿ ಮಕ್ಕಳು ಕೂಡ ಈ ಕೆಸರು ನೀರು ತುಂಬಿದ ರಸ್ತೆಯಿಂದಾಗಿ ಪರದಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಬಿರು ಬೇಸಿಗೆ ಕಳೆದು ಮಳೆಯ ಸಂಭ್ರಮ ಒಂದೆಡೆಯಾದರೆ, ಮಳೆಯಿಂದಾಗಿ ರಸ್ತೆ ಕೆಸರಿನ ಹೊಳೆಯಾಗುವ ಸ್ಥಿತಿ ಮತ್ತೊಂಡೆದೆ. ನೀರು ಹರಿದುಹೋಗಲು ಯಾವುದೇ ವ್ಯವಸ್ಥೆ ಕಲ್ಪಿಸದೇ ಇರುವುದು ಇದಕ್ಕೆ ಕಾರಣ ಎಂಬ ಅರಿವಿದ್ದರೂ ಅಗತ್ಯವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ಇದಕ್ಕೆ ಕಾರಣವಾಗಿದೆ. ಏನೇ ಇರಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆ ಮಳೆಗಾಲ ಸಂಪೂರ್ಣವಾಗಿ ಪ್ರಾರಂಭವಾಗುವುದರೊಳಗೆ ಆದಷ್ಟು ಬೇಗನೆ ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಬೇಕು. ಜೊತೆಗೆ ಈ ಸಮಸ್ಯೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.