ಉಡುಪಿ, ಮೇ.25 (DaijiworldNews/AA): ಚಿತ್ರದುರ್ಗದಿಂದ ಮಂಗಳೂರಿಗೆ ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯನ್ನು ಕರೆದುಕೊಂಡು ಬರುತ್ತಿದ್ದ ಖಾಸಗಿ ಕಾರೊಂದು ಚಾಲಕನ ನಿದ್ದೆ ಮಂಪರಿಗೆ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಚರಂಡಿಗೆ ಸಿಲುಕಿದ ಘಟನೆ ಮೇ 24ರಂದು ಉಡುಪಿಯ ಪೆರ್ಡೂರು ಸಮೀಪದ ಪಾಡಿಗಾರ ಎಂಬಲ್ಲಿ ನಡೆದಿದೆ.
ಅದೇ ದಾರಿಯಲ್ಲಿ ಮಲ್ಪೆ ಬೀಚ್ ಗೆ ಬರುತ್ತಿದ್ದ ಈಶ್ವರ್ ಮಲ್ಪೆಯವರ ಸ್ನೇಹಿತರಾದ ಭದ್ರಾವತಿಯ ಸ್ನೇಕ್ ಜೋಸ್ವಾ ಹಾಗೂ ಅವರ ತಂಡವು ಇವರನ್ನು ಗಮನಿಸಿದೆ. ಈ ವೇಳೆ ರೋಗಿಯನ್ನು ಮಳೆಯಲ್ಲಿಯೇ ರಸ್ತೆಯಲ್ಲಿ ಮಲಗಿಸಲಾಗಿತ್ತು. ಇದನ್ನು ಕಂಡ ಸ್ನೇಕ್ ಜೋಸ್ವಾ ಅವರು ತಕ್ಷಣ ಈಶ್ವರ್ ಮಲ್ಪೆಯವರಿಗೆ ಕರೆ ಮಾಡಿದ್ದಾರೆ.
ಕರೆಗೆ ಸ್ಪಂದಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡವು, ಪೆರ್ಡೂರು ಪಾಡಿಗಾರಕ್ಕೆ ಆಗಮಿಸಿ ರೋಗಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಉಚಿತ ಸೇವೆಯ ಮೂಲಕ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.