ಮಣಿಪಾಲ, ಮೇ 25 (DaijiworldNews/MS): ಕಟ್ಟಡ ಕಾಮಗಾರಿ ವೇಳೆ ನಾಲ್ಕನೆ ಮಹಡಿಯಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮೇ 23ರಂದು ಸಂಜೆ ವೇಳೆ ಮಣಿಪಾಲ ಈಶ್ವರನಗರ ಎಂಬಲ್ಲಿ ನಡೆದಿದೆ.
ಮೃತರನ್ನು ಕುಕ್ಕೆಹಳ್ಳಿ ಗ್ರಾಮದ ರಘುರಾಮ ಕುಲಾಲ್(50) ಎಂದು ಗುರುತಿಸಲಾಗಿದೆ. ಮಣಿಪಾಲದ ಈಶ್ವರದ ನಗರದ ಕಟ್ಟಡ ಕಾಮಗಾರಿ ಕೆಲಸ ನಡೆಯುತ್ತಿದ್ದು, ಒಂದು ತಿಂಗಳಿನಿಂದ ಹತ್ತು ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮೃತ ರಘು ರಾಮ್ ಸಹೋದರ ಪದ್ಮನಾಭ ಅವರೂ ಈ ತಂಡದಲ್ಲಿದ್ದರು ರಘು ರಾಮ್ ಅವರು ಮಹಡಿಯ ಹೊರಭಾಗದ ಗಾರೆ ಕೆಲಸ ಮಾಡುತ್ತಿದ್ದರು.
ಕೆಲಸ ಮಾಡುತ್ತಿದ್ದ ವೇಳೆ ಬಕೆಟ್ ತರಲು ಕಟ್ಟಡದ ಹೊರಮೈಯ ಪ್ಯಾರಾಪೀಟ್ ಮೇಲೆ ಕಾಲು ಇಟ್ಟಿದ್ದರು. ಈ ವೇಳೆ ಅವರು ಕಾಲು ಜಾರಿ ಕೆಳಕ್ಕೆ ೫೦ ಅಡಿ ಆಳಕ್ಕೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಕಟ್ಟಡದ ಮಾಲಕ ಗಣೇಶ ಮತ್ತು ಕಟ್ಟಡದ ಗುತ್ತಿಗೆದಾರ ಅಮರೇಶ ಕಟ್ಟಡದ ಗಾರೆ ಕೆಲಸ ಮಾಡುವ ವೇಳೆ ಮುಂಜಾಗೃತ ದೃಷ್ಠಿಯಿಂದ ಯಾವುದೇ ಸುರಕ್ಷತಾ ಸಾಧನಗಳನ್ನು ಅಳವಡಿಸದೇ ಇದ್ದುದರಿಂದ ಈ ಘಟನೆ ನಡೆದಿದೆ ಎಂದು ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.