ಕಾಸರಗೋಡು, ಮೇ 25 (DaijiworldNews/MS): ಹೊಸದುರ್ಗ ಠಾಣಾ ವ್ಯಾಪ್ತಿಯ ಹತ್ತು ವರ್ಷದ ಬಾಲಕಿಯನ್ನು ಅಪಹರಿಸಿ , ಲೈಂಗಿಕ ದೌರ್ಜನ್ಯ ನಡೆಸಿ ಕಿವಿಯೋಲೆಯನ್ನು ದರೋಡೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ವಿಶೇಷ ತನಿಖಾ ತಂಡ ಆಂಧ್ರಪ್ರದೇಶದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದೆ .
ಮಡಿಕೇರಿ ನಾಪೋಕ್ಲುವಿನ ಸಲೀಂ (29) ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಈತನನ್ನು ಕಾಸರಗೋಡಿಗೆ ಕರೆತರಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ವಂತವಾಗಿ ಮೊಬೈಲ್ ಫೋನ್ ಬಳಸದ ಈತ ಬೇರೆಯೊಬ್ಬನ ಮೊಬೈಲ್ ಮೂಲಕ ಮನೆಯವರನ್ನು ಸಂಪರ್ಕಿಸಿದ್ದು , ಈ ನಂಬರ್ ಕೇಂದ್ರೀಕರಿಸಿ ತನಿಖೆ ನಡೆಸಿದ ತನಿಖಾ ತಂಡ ಈತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ . ಬಾಲಕಿಯನ್ನು ಅಪಹರಿಸಿದ್ದ ದಿನ ಲಭಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಈತನ ಚಲನವಲನ ಗಮನಿಸಿದ ತನಿಖಾ ತಂಡ ಆರೋಪಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿದೆ.
ಮೇ 15 ರಂದು ಮುಂಜಾನೆ ಪಡನಕ್ಕಾಡ್ನಲ್ಲಿರುವ ತನ್ನ ಮನೆಯಲ್ಲಿ ಬಾಲಕಿ ಮಲಗಿದ್ದಾಗ ಆರೋಪಿ ಕರೆದುಕೊಂಡು ಹೋಗಿದ್ದ. ದುಷ್ಕರ್ಮಿಯು ಬಾಲಕಿಯ ಅಜ್ಜ ತೆರೆದಿಟ್ಟಿದ್ದ ಮುಂಭಾಗದ ಬಾಗಿಲಿನ ಮೂಲಕ ಪ್ರವೇಶಿಸಿದ್ದು ಮತ್ತು ಆಕೆಯ ಚಿನ್ನದ ಕಿವಿಯೋಲೆಗಳನ್ನು ದೋಚಿಕೊಂಡು ಒಂದು ಕಿಲೋಮೀಟರ್ ದೂರದಲ್ಲಿ ಅವಳನ್ನು ಬಿಟ್ಟು ಪರಾರಿಯಾಗಿದ್ದನು. ವೈದ್ಯಕೀಯ ವರದಿಯ ನಂತರ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿತ್ತು.
ದುಷ್ಕರ್ಮಿಯುಬಾಲಕಿಯನ್ನು ಅಡುಗೆಮನೆಯ ಬಾಗಿಲಿನಿಂದ ಕರೆದೊಯ್ದು ಹತ್ತಿರದ ಗದ್ದೆಯಲ್ಲಿ ತೊರೆದಿದ್ದು , ಬೆದರಿಕೆ ಹಾಕಿದ್ದನು. ಬಾಲಕಿಯು ಸಮೀಪದ ಮನೆಗೆ ತೆರಳಿ ಮಾಹಿತಿ ನೀಡಿದ್ದು , ಬಳಿಕ ಮನೆಯವರನ್ನು ಸಂಪರ್ಕಿಸಿದ ಸಮೀಪದ ಮನೆಯವರು ಮಾಹಿತಿ ನೀಡಿ ಬಾಲಕಿಯನ್ನು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು . ಪ್ರಕರಣವನ್ನು ಗಂಭೀರವಾಗಿ ತೆಗೆದು ಕೊಂಡು ಎಸ್ ಐಟಿ ಗೆ ತನಿಖೆ ಒಪ್ಪಿಸಿದ್ದರು.
ಉತ್ತರ ವಲಯ ಉಪ ನಿರೀಕ್ಷಕ ಥಾಮ್ಸನ್ ಜೋಸ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥ ಪಿ ಬಿಜೋಯ್ ನೇತೃತ್ವದ ತಂಡವು ತನಿಖೆಯ ಉಸ್ತುವಾರಿ ವಹಿಸಿತ್ತು. 20 ಸದಸ್ಯರನ್ನೊಳಗೊಂಡ ಎಸ್ಐಟಿ ತನಿಖಾ ತಂಡದಲ್ಲಿ ಡಿವೈಎಸ್ಪಿಗಳಾದ ಲತೀಶ್, ಸಿ. ಕೆ ಸುನೀಲ್ಕುಮಾರ್ ಮತ್ತು ಪಿ ಬಾಲಕೃಷ್ಣನ್ ನಾಯರ್ ಅವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಎಂ. ಪಿ ಆಜಾದ್ ಮತ್ತು ಸಬ್ ಇನ್ಸ್ಪೆಕ್ಟರ್ಗಳಾದ ಅಖಿಲ್ ಮತ್ತು ಎಂಟಿಪಿ ಸೈಫುದ್ದೀನ್ ಮೊದಲಾದವರಿದ್ದಾರೆ.