ಮಂಗಳೂರು, ಮೇ 25 (DaijiworldNews/MS): ಭಾರೀ ಮಳೆಯಿಂದಾಗಿ ನಗರದಲ್ಲಿ ದುರಂತವೊಂದು ಸಂಭವಿಸಿದ್ದು, ಉಕ್ಕಿ ಹರಿಯುತ್ತಿದ್ದ ರಾಜಕಾಲುವೆಗೆ ಆಟೋ ರಿಕ್ಷಾ ಉರುಳಿ ಅದರ ಚಾಲಕ ಸಾವನ್ನಪ್ಪಿದ ಘಟನೆ ನಗರದ ಕೊಟ್ಟಾರದ ಅಬ್ಬಕ್ಕ ನಗರದಲ್ಲಿ ಮೇ ೨೪ ರ ಶುಕ್ರವಾರ ರಾತ್ರಿ ನಡೆದಿದೆ.
ಮೃತರನ್ನು ಅಟೋ ಚಾಲಕ ದೀಪಕ್ (40) ಎಂದು ಗುರುತಿಸಲಾಗಿದೆ.
ಮಂಗಳೂರಿನಲ್ಲಿ ಶುಕ್ರವಾರ ರಾತ್ರಿ ಭಾರೀ ಮಳೆ ಸುರಿಯುತ್ತಿದ್ದು, ಹೀಗಾಗಿ ಕೊಟ್ಟಾರದಲ್ಲಿದ್ದ ರಾಜಕಾಲುವೆ ತುಂಬಿ ಹರಿಯುತ್ತಿತ್ತು. ಈ ರಾಜಕಾಲುವೆಗೆ ಯಾವುದೇ ತಡೆಗೋಡೆ ಇಲ್ಲದ ಕಾರಣ ನೀರು ರಸ್ತೆಗೂ ಬಂದಿತ್ತು. ರಾಜಕಾಲುವೆಯು ಉಕ್ಕಿದ ಪರಿಣಾಮ ರಸ್ತೆಯ ವ್ಯತ್ಯಾಸ ತಿಳಿಯದೆ ಸಮಾನವಾಗಿ ನೀರು ಹರಿಯುತ್ತಿತ್ತು.
ರಾತ್ರಿ ವೇಳೆ ಆ ರಸ್ತೆಯಲ್ಲಿ ಸಂಚರಿಸೋ ವೇಳೆ ರಸ್ತೆ ಹಾಗೂ ಕಾಲುವೆಯ ವ್ಯತ್ಯಾಸ ತಿಳಿಯದೆ ರಾಜಕಾಲುವೆಗೆ ಆಟೋ ಉರುಳಿದ್ದು, ನೀರಿನಲ್ಲಿ ಮುಳುಗಿ ಚಾಲಕ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಹಾಗೂ ದಾರಿಹೋಕರು ಮೃತದೇಹ ಮೇಲೆತ್ತಿದ್ದಾರೆ.
ಕಾಲುವೆಗೆ ತಡೆಗೋಡೆ ನಿರ್ಮಿಸದೇ ಇರುವುದು ಭಾರೀ ಅನಾಹುತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿದ್ದು, ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.