ಬಂಟ್ವಾಳ, ಮೇ 24 (DaijiworldNews/ AK):ಬಿಸಿರೋಡಿನ ಬಸ್ ನಿಲ್ದಾಣ ಪಿಕ್ ಪಾಕೆಟ್ ತಾಣವಾಗಿ, ಕಳ್ಳರ ಕೇಂದ್ರವಾಗಿ ಮಾರ್ಪಾಡು ಹೊಂದಿದ್ದು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬಸ್ ಗೆ ಹತ್ತುವ ಮಹಿಳೆಯರ ನಗ ನಗದು ಕಳವು ನಡೆಯುತ್ತಿದ್ದು, ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಅನೇಕ ಬಾರಿ ಮಾಧ್ಯಮಗಳು ವರದಿ ಬಿತ್ತರಿಸಿ ಎಚ್ಚರಿಸಿದ್ದರು ಕೂಡ ಯಾವುದೇ ರೀತಿಯ ಕ್ರಮವಹಿಸದ ಪೋಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.ಇದೀಗ ಮತ್ತೆ ಇಂದು ಬೆಳಿಗ್ಗೆ ಗಂಡ ಮತ್ತು ಮಗುವಿನ ಜೊತೆ ಬಸ್ ಹತ್ತುವ ವೇಳೆ ಬ್ಯಾಗಿನೊಳಗಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನ ಕಳವಾದ ಪ್ರಕರಣ ವರದಿಯಾಗಿದೆ.ಮೇ.23 ರ ಇಂದು ಬೆಳಿಗ್ಗೆ ವೇಳೆ ಬೆಳ್ತಂಗಡಿ ನಿವಾಸಿ ಶಶಿಕಲಾ ಅವರ ಸುಮಾರು 2 ಲಕ್ಷ ಮೌಲ್ಯದ ಚಿನ್ನ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳ್ಳತನ ನಡೆದದ್ದು ಎಲ್ಲಿ? ಹೇಗೆ?
ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮನಡಿಗಲ್ ಆದರ್ಶ ನಗರ ನಿವಾಸಿ ಜಗದೀಶ ಅವರ ಪತ್ನಿ ಶಶಿಕಲಾ ಅವರು ಶಾಲೆಗೆ ರಜೆಯ ಹಿನ್ನೆಲೆಯಲ್ಲಿ ಮಗುವಿನ ಜೊತೆ ಗೋಳ್ತಮಜಲು ಗ್ರಾಮದ ನೆಟ್ಲದಲ್ಲಿರುವ ತಾಯಿ ಮನೆಗೆ ಬಂದಿದ್ದರು. ಇಂದು ಮತ್ತೆ ವಾಪಸು ಗಂಡನ ಜೊತೆ ಬೆಳ್ತಂಗಡಿಗೆ ತೆರಳುವ ಉದ್ದೇಶದಿಂದ ಬಿಸಿರೋಡಿಗೆ ಬಂದಿದ್ದು, ಬಸ್ ನಿಲ್ದಾಣದ ಸಮೀಪದ ಅಂಗಡಿಯೊಂದರಿಂದ ತಿಂಡಿಯನ್ನು ಪಡೆದುಕೊಂಡು ಬೆಳ್ತಂಗಡಿಗೆ ಪ್ರಯಾಣಿಸುವುದಕ್ಕೆ ಬಸ್ ಹತ್ತುವ ವೇಳೆ ಬ್ಯಾಗ್ ನೊಳಗಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನ ಕಳವಾಗಿದೆ.
ಮಗುವಿನ ಜೊತೆ ಗಂಡ ಬಸ್ ಹತ್ತಿದ್ದು,ಅವರ ಹಿಂದೆ ಶಶಿಕಲಾ ಅವರು ಬಸ್ ಹತ್ತುವ ಸಮಯದಲ್ಲಿ ಹಿಂಬದಿಯಿಂದ ಬ್ಯಾಗ್ ನೊಳಗಿದ್ದ ಚಿನ್ನದ ಪಾಕೆಟ್ ನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ಬಿ.ಸಿರೋಡ್ ಖಾಸಗಿ ಬಸ್ ನಿಲ್ದಾಣದ ಬಳಿ ಬೆಳ್ತಂಗಡಿ ಧರ್ಮಸ್ಥಳ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುವ ಸಮಯ 10:30 ಗಂಟೆಗೆ ನನ್ನ ಬ್ಯಾಗ್ನಲ್ಲಿದ್ದ.ಸುಮಾರು 45 ಗ್ರಾಂ ವಿವಿಧ ಶೈಲಿಯ ಮತ್ತು ವಿವಿಧ ಮಾದರಿಯ ಹಳೆಯ ಚಿನ್ನಾಭರಣಗಳು ಕಾಣೆಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ
ಈ ವರೆಗೂ ಕಳವಾದ ಚಿನ್ನಾಭರಣದ ವಿವರ:
ಚಿನ್ನದ ಸರ 2 ಮತ್ತು ಪೆಂಡೆಂಟ್ 2 ಅಂದಾಜು ತೂಕ 18 ಗ್ರಾಂ
ಮಗುವಿಗೆ ಧರಿಸಿದ ಚಿಕ್ಕ ಚೈನ್ 1 ಅಂದಾಜು ತೂಕ4 ಗ್ರಾಂ
ಚೆಂಡೋಲೆ 2 ಜೊತೆ ಅಂದಾಜು ತೂಕ 6 ಗ್ರಾಂ
ಮಗುವಿನ ಕಿವಿಗೆ ಧರಿಸಿದ ಚಿನ್ನದ ಗುಂಡು 1 ಜೊತೆ ಅಂದಾಜು ತೂಕ 1.1/2 ಗ್ರಾಂ
ಬಳೆ -01 ಅಂದಾಜು ತೂಕ 8 ಗ್ರಾಂ
ಉಂಗುರ -01 ಅಂದಾಜು ತೂಕ 1.1/2 ಗ್ರಾಂ
7.ಕಿವಿಗೆ ಧರಿಸುವ ಜುಂಕಿ 01 ಜೊತೆ ಅಂದಾಜು ತೂಕ 6ಗ್ರಾಂ.
ಯಾರು ಟಾರ್ಗಟ್
ಬಸ್ ಗಾಗಿ ಕಾಯುತ್ತಿರುವವರು, ಬಸ್ ಹತ್ತುವ ವೇಳೆ,ತುಂಬಾ ಜನಜಂಗುಳಿಯ ಸಮಯದಲ್ಲಿ, ಮಗುವನ್ನು ಹಿಡಿದು ಕೊಂಡು ಬಸ್ ಹತ್ತುವ ವೇಳೆ, ನೂಕು ನುಗ್ಗಲು ಇರುವ ಸಮಯದಲ್ಲಿ, ಮಹಿಳೆಯರನ್ನೇ ಹೆಚ್ಚಾಗಿ ಕಳ್ಳರು ಟಾರ್ಗೆಟ್ ಮಾಡುತ್ತಾರೆ. ಹಾಗಾಗಿ ಬಿಸಿರೋಡಿನಲ್ಲಿ ಬಸ್ ಗಾಗಿ ಕಾಯುತ್ತಿರುವ ಮಹಿಳೆಯರು ಹೆಚ್ಚು ಜಾಗೃತೆ ವಹಿಸಬೇಕಾಗಿದೆ.
ಸಿ.ಸಿ.ಕ್ಯಾಮರಾ ಅಳವಡಿಸಿ, ಪೋಲೀಸರನ್ನು ನಿಯೋಜಿಸಿ
ನಿತ್ಯನಿರಂತರವಾಗಿ ಕಳೆದ ಕೆಲವು ತಿಂಗಳಿನಿಂದ ಪಿಕ್ ಪಾಕೆಟ್ ಗಳು ನಡೆಯುತ್ತಿದ್ದರೂ ಕೂಡ ಪೋಲೀಸ್ ಇಲಾಖೆ ಕಳ್ಳರ ಜಾಡನ್ನು ಹಿಡಿಯುವಲ್ಲಿ ವಿಫಲಾವಾಗಿದೆ.
ಕನಿಷ್ಠ ಪಕ್ಷ ಈ ಭಾಗದಲ್ಲಿ ಸಿವಿಲ್ ಪೋಲೀಸರು ರೌಂಡ್ಸ್ ಹೊಡೆದರೂ ಕಳ್ಳರ ಚಲನವಲನಗಳನ್ನು ಪತ್ತೆ ಹಚ್ಚಬಹುದಿತ್ತು. ಅನೇಕ ದೂರುಗಳು ನಗರ ಪೋಲೀಸ್ ಠಾಣೆಯಲ್ಲಿ ದಾಖಲಾದರೂ ಕೂಡ ಪೋಲೀಸರು ಮಾತ್ರ ತಲೆಕೆಡಿಸಿಕೊಂಡಿಲ್ಲ, ಮತ್ತೆ ಮತ್ತೆ ಬಸ್ ಸ್ಟ್ಯಾಂಡ್ ನಲ್ಲಿ ಕಳವು ನಡೆಯುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.
ಬಸ್ ನಿಲ್ದಾಣದಲ್ಲಿ ಈಗ ಇರುವ ಸಿ.ಸಿ.ಕ್ಯಾಮರಾ ಜೊತೆ ಇನ್ನಷ್ಟು ಬೆಲೆಬಾಳುವ ಸಿ.ಸಿ.ಕ್ಯಾಮರಾ ಅಳವಡಿಸಿ ಎಂಬ ಒತ್ತಾಯ ಗಳು ಕೇಳಿ ಬಂದಿವೆ. ಅಲ್ಲದೆ ಇಲ್ಲಿರುವ ಅಂಗಡಿಗಳ ಸಿ.ಸಿ.ಕ್ಯಾಮರಾ ಗಳ ಪೂಟೇಜ್ ಗಳನ್ನು ಪಡೆದು ಕಳ್ಳರನ್ನು ಪತ್ತೆ ಹಚ್ಚಿ ಎಂಬ ಮಾತುಗಳು ಕೇಳಿ ಬಂದಿವೆ.
ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ಲೈ ಓವರ್ ನ ಅಡಿಭಾಗದಲ್ಲಿ ಜನರು ದಾಟಲು ಸಹಕಾರ ನೀಡುವ ನಿಟ್ಟಿನಲ್ಲಿ ಓರ್ವ ಟ್ರಾಫಿಕ್ ಪೋಲೀಸ್ ಸಿಬ್ಬಂದಿ ದಿನದ ಪೂರ್ತಿ ಇರುತ್ತಾರೆ. ಆದರೆ ಟ್ರಾಫಿಕ್ ಪೋಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿರುವ ಸಮಯದಲ್ಲಿ ಕಳವು ನಡೆಯುತ್ತಿರುವುದು ಕಳ್ಳರ ಕೈ ಚಳಕಕ್ಕೆ ಸಾಕ್ಷಿಯಾಗಿದೆ.