ಕಾಸರಗೋಡು, ಮೇ 23 (DaijiworldNews/AK): ಚಲಿಸುತ್ತಿದ್ದ ಟ್ಯಾಂಕರ್ ನಿಂದ ಅನಿಲ ಸೋರಿಕೆ ಉಂಟಾದ ಘಟನೆ ಕಾಞ೦ಗಾಡ್ ಸಮೀಪದ ಚಿತ್ತಾರಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದ್ದು , ಗಂಟೆಗಳ ಬಳಿಕ ಸೋರಿಕೆ ತಡೆಗಟ್ಟಲಾಗಿದೆ.
ಸುತ್ತಲಿನ ಸುಮಾರು 500ಮೀಟರ್ ನಷ್ಟು ದೂರದ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ .ಈ ರಸ್ತೆಯ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಳಿಗ್ಗೆ 7.30 ರ ಸುಮಾರಿಗೆ ಸೋರಿಕೆ ಕಂಡು ಬಂದಿದ್ದು , ಕೂಡಲೇ ಚಾಲಕ ಟ್ಯಾಂಕರ್ ನಿಲುಗಡೆ ಗೊಳಿಸಿ ಕಂಪೆನಿ ಅಧಿಕಾರಿಗಳಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಟ್ಯಾಂಕರ್ ಮಂಗಳೂರಿನಿಂದ ಕೋಜಿಕ್ಕೋಡ್ ಗೆ ತೆರಳುತ್ತಿತ್ತು.
ಹತ್ತು ಗಂಟೆ ಸುಮಾರಿಗೆ ಸೋರಿಕೆ ತಡೆಗಟ್ಟಲಾಯಿತು. ಸೋರಿಕೆ ಕಂಡು ಬಂದ ಕೂಡಲೇ ಟ್ಯಾಂಕರನ್ನು ಚಾಲಕ ರಸ್ತೆ ಬದಿ ನಿಲುಗಡೆ ಗೊಳಿಸಿದ್ದರಿಂದ ಭಾರೀ ದುರಂತ ತಪ್ಪಿದೆ. ಸೋರಿಕೆಯಾದ ಟ್ಯಾಂಕರ್ ನಲ್ಲಿರುವ ಅನಿಲವನ್ನು ಮೂರು ಟ್ಯಾಂಕರ್ ಗಳಿಗೆ ವರ್ಗಾಹಿಸುವ ಪ್ರಕ್ರಿಯೆ ನಡೆಯುತ್ತಿದ್ದು, ರಾತ್ರಿ ವೇಳೆಗಷ್ಟೇ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಕಾಞ೦ಗಾಡ್ , ಕಾಸರಗೋಡು ಮೊದಲಾದೆಗಳಿಂದ ಮೂರು ಘಟಕ ಅಗ್ನಿಶಾಮಕ ದಳದ ಸಿಬಂದಿಗಳು ಸೋರಿಕೆ ತಡೆಗಟ್ಟಲು ಹಸರಸಾಹಸಪಟ್ಟಿದ್ದು. ಮಂಗಳೂರಿನಿಂದ ಅಧಿಕಾರಿಗಳ ತಂಡವು ಸ್ಥಳಕ್ಕೆ ಆಗಮಿಸಿದ್ದು , ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ .