ಕುಂದಾಪುರ,ಮೇ 08 (Daijiworld News/MSP): ಓರ್ವನಿಂದ ಆಗುವ ಪರಿವರ್ತನೆ ಜಗತ್ತಿನ ಪರಿವರ್ತನೆಗೆ ಕಾರಣವಾಗುತ್ತದೆ. ’ನಾನು’ ಎನ್ನುವ ಆಹಂ ವ್ಯಕ್ತಿಯಲ್ಲಿ ನಾಶವಾದಾಗ ಬದಲಾವಣೆ ಸಾಧ್ಯವಾಗುತ್ತದೆ. ಶಿಕ್ಷಣದಲ್ಲಿ, ಜ್ಞಾನದಲ್ಲಿ ಬದಲಾವಣೆ ಆಗಬೇಕಿದೆ. ಸಮಾಜಮುಖಿ ಚಿಂತನೆಗಳೊಂದಿಗೆ ಸಮಾಜದ ಋಣವನ್ನು ತೀರಿಸುವ ದೊಡ್ಡ ಕೆಲಸ ಆಗಬೇಕಾಗಿದೆ. ಶ್ರೀಹರಿ ಮತ್ಸ್ಯಾವತಾರ ತಾಳಿದಾಗ ಸಣ್ಣ ಮರಿಯಾಗಿ ಮುನಿಯ ಬೊಗಸೆಯಲ್ಲಿ ಬಂದ ಮೀನಿನ ಮರಿಯೊಂದು ಬೃಹದಾಕಾರ ಪಡೆಯುವಂತೆ ಈ ಭಾಗದಲ್ಲಿ ಕಳೆದ ಮೊವತ್ತು ವರ್ಷಗಳಿಂದಿಚೆ ದೊಡ್ಡ ಮಟ್ಟದಲ್ಲಿ ಪರಿವರ್ತನೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ನಾವುಂದ ಬೊಬ್ಬರ್ಯಹಿತ್ಲು ಸಪರಿವಾರ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನ ನೂತನ ಶಿಲಾ ದೇಗುಲ ಸಮರ್ಪಣೆ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಹಿಂದೆ ಸಮುದ್ರದಲ್ಲಿನ ನಾವೆಗಳಿಗೆ ರಾತ್ರಿಯ ವೇಳೆ ತೀರಗಳ ಮುನ್ಸೂಚನೆ ನೀಡಲು ದೀಪಸ್ತಂಭಗಳ ಸ್ಥಾಪನೆ ಮಾಡುತ್ತಿದ್ದರು. ಅಂತೆಯೇ ಈ ಪದ್ಮಾವತಿ ದೇವಾಲಯ ಕಡಲ ತೀರದಲ್ಲಿಯೇ ಇದೆ. ಈ ದೇವಾಲಯ ಬದುಕಿನ ಗೊಂದಲಗಳ ಅಲೆಯಲ್ಲಿ ಸಿಲುಕಿದವರಿಗೆ ದಿಕ್ಕು ತೋರಿಸುವ ಬೆಳಕಾಗಿ ಕಾಣಲಿ. ಈ ಬೆಳಕು ಬದುಕಿನ ಸಾಧನೆ ಮಾಡಿಕೊಳ್ಳಲು ಸ್ಪೂರ್ತಿಯಾಗಲಿ ಎಂದರು.
ಮಹಾಲಕ್ಷ್ಮೀ ಕ್ಷೇತ್ರ ’ಶ್ರೀಧಾಮ’ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ದೇವಸ್ಥಾನಗಳನ್ನು ಕಟ್ಟುವುದು ಮುಖ್ಯವಲ್ಲ. ಅಲ್ಲಿ ಶಾಸ್ತ್ರೋಕ್ತವಾಗಿ ಪೂಜಾವಿಧಾನಗಳು, ಆಚಾರ ವಿಚಾರ, ಕಟ್ಟುಪಾಡುಗಳು ನಡೆಯಬೇಕು. ದೇವಸ್ಥಾನಗಳಲ್ಲಿ ಕರ್ಮಾಂಗಗಳು ಪರಿಪೂರ್ಣವಾಗಿ ನಡೆದಾಗಲೇ ದೇವತಾ ಸಾನಿಧ್ಯವೂ ಹೆಚ್ಚುತ್ತದೆ. ಇಂಥಹ ದೇವತಾ ಕ್ಷೇತ್ರಗಳು ದೇಶದ ಸಾರ್ವಭೌಮತೆ ವೃದ್ದಿಸುವ ಕಾರ್ಯ ಮಾಡಬೇಕು ಎಂದರು.
ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಾಹಿತಿ, ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಬೈಕಂಪಾಡಿ, ಬೆಹರಿನ್ನ ಸಮಾಜ ಸೇವಕ ಲೀಲಾಧರ ಬೈಕಂಪಾಡಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಹಾಜಿ ಅಂದೂಕಾ ಸಾಹೇಬ್, ಜ್ಯೋತಿಷ್ಯರಾದ ಸಿ.ಪಿ.ಗೋಪಾಲಕೃಷ್ಣ ಫಣಿಕ್ಕರ್ ಪಯ್ಯನ್ನೂರು, ನಾವುಂದ ಜುಮ್ಮಾ ಮಸೀದಿ ಧರ್ಮಗುರು ಇಕ್ತಿಯಾರ್ ಕಾಮಿಲ್, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ಪೂಜಾರಿ, ಪದ್ಮಾವತಿ ಅಮ್ಮನವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಗೌರವ ಅಧ್ಯಕ್ಷರಾದ ಕೃಷ್ಣ ಎಂ.ಕುಂದರ್, ಮೀನುಗಾರರ ಸೇವಾ ಸಮಿತಿ ಮರವಂತೆ ಇದರ ಅಧ್ಯಕ್ಷರಾದ ಮೋಹನ್ ಖಾರ್ವಿ, ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘ ಉಪ್ಪುಂದ ಇದರ ಅಧ್ಯಕ್ಷರಾದ ರಾಮಚಂದ್ರ ಖಾರ್ವಿ, ಮೀನುಗಾರರ ಸೇವಾ ಸಮಿತಿ ಕೊಡೇರಿ ಅಧ್ಯಕ್ಷರಾದ ಪ್ರಕಾಶ ಖಾರ್ವಿ, ಮುಂಬಯಿ ಉದ್ಯಮಿ ಸುರೇಶ ಕಾಂಚನ್, ಮಹಾಬಲ ಕುಂದರ್,ತೌಪಿಕ್ ಅಬ್ದಲ್ ಸಾಹೇಬ್, ಪ್ರಧಾನ ಅರ್ಚಕರಾದ ರಾಘವೇಂದ್ರ ಕಾರಂತ ಉಪಸ್ಥಿತರಿದ್ದರು.
ಪದ್ಮಾವತಿ ಅಮ್ಮನವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಆರ್ಥಿಕ ನೆರವು ನೀಡಿದ ದಾನಿಗಳನ್ನು ಹೆಗ್ಗಡೆಯವರು ಹಾಗೂ ಸ್ವಾಮೀಜಿಗಳು ಅಭಿನಂದಿಸಿದರು. ದೇವಳ ನಿರ್ಮಾಣಕ್ಕೆ ಶ್ರಮಿಸಿದರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇ.ಧ,ಗ್ರಾ.ಯೋಜನೆ, ಬೈಂದೂರು ತಾಲೂಕು ಸಮಿತಿ, ಸ್ಥಳೀಯ ಒಕ್ಕೂಟದ ವತಿಯಿಂದ ಹೆಗ್ಗಡೆ ಅವರನ್ನು ಗೌರವಿಸಲಾಯಿತು. ಹೆಗ್ಗಡೆಯವರ ಆಗಮನದ ಸವಿನೆನಪಿಗಾಗಿ ಆರು ಸ್ವಸಹಾಯ ಸಂಘಗಳಿಗೆ ಹೆಗ್ಗಡೆಯವರು ಚಾಲನೆ ನೀಡಿದರು. ಶಶಿಧರ ಶೆಟ್ಟಿ ಮತ್ತು ಪಾಂಡುರಂಗ ಬೈಂದೂರು ಕಾರ್ಯಕ್ರಮ ನಿರ್ವಹಿಸಿ, ಅನಂದ ತೋಳಾರ್ ವಂದಿಸಿದರು.