ಬೆಳ್ತಂಗಡಿ ಮೇ 23 (DaijiworldNews/MS): ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿವಾಸದ ಮುಂದೆ ದಿನವಿಡೀ ನಡೆದ ಹೈಡ್ರಮಾದ ಬಳಿಕ ರಾತ್ರಿ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಶರಣಾಗಿದ್ದು ಪೊಲೀಸ್ ವಿಚಾರಣೆ ಬಳಿಕ ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನ ಬಂಧನಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ನಿವಾಸಕ್ಕೆ ಪೊಲೀಸರು ತೆರಳಿದ್ದಾಗ ದೊಡ್ಡ ಹೈಡ್ರಾಮವೇ ನಡೆದಿತ್ತು.
ಈ ವೇಳೆ ಸ್ಥಳದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳೀನ್ ಕುಮಾರ್ ಕಟೀಲ್ ರವರು, ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ಪೊಲೀಸರಿಗೆ ವಿನಂತಿಸಿಕೊಂಡಿದ್ದರು. ಅದರಂತೆ ಸಂಸದರು ಆರೋಪಿತರಾದ ಹರೀಶ್ ಪೂಂಜಾರನ್ನು ಪೊಲೀಸರೊಂದಿಗೆ ಠಾಣೆಗೆ ಕಳುಹಿಸಿದ್ದು, ಬಳಿಕ ಪೊಲೀಸರ ವಿಚಾರಣೆ ಎದುರಿಸಿದರು.
ಪ್ರತಿಭಟನೆ ಸಭೆಯಲ್ಲಿ ಪೊಲೀಸರಿಗೆ ನಿಂದಿಸಿ ಜೀವ ಬೆದರಿಕೆ ಹಾಕಿದ, ಹಾಗೂ ಠಾಣೆಗೆ ನುಗ್ಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾ ಎಸ್ಪಿ ರಿಷ್ಯಂತ್ ಸಿಂಗ್ ರಾತ್ರಿ 10.45ಕ್ಕೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.