ಮಂಗಳೂರು, ಮೇ 08 (Daijiworld News/MSP): ’ ದಕ್ಷ ಐಪಿಎಸ್ ಅಧಿಕಾರಿ ಡಾ| ಮಧುಕರ ಶೆಟ್ಟಿ ’ ಅವರು ಐದು ತಿಂಗಳ ಹಿಂದೆ ಅಕಾಲಿಕವಾಗಿ ಸಾವಿಗೀಡಾಗಿದ್ದು, ಸಾವಿನ ಕುರಿತು ಸಂಶಯ ಇರುವುದರಿಂದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಆಗ್ರಹಿಸಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಕರ್ ಅವರನ್ನು ಹೃದಯ ಸಂಬಂಧಿ ಸಮಸ್ಯೆ ಎಂದು ಹೈದರಾಬಾದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 36 ಗಂಟೆಗಳ ಕಾಲ ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡಲಿಲ್ಲ. ಬದಲಾಗಿ ಎಚ್1ಎನ್1ನ ಚಿಕಿತ್ಸೆ ನೀಡಿದ್ದು ವೈದ್ಯಕೀಯ ನಿರ್ಲಕ್ಷ್ಯ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಒಬ್ಬ ಐಪಿಎಸ್ ಅಧಿಕಾರಿಯ ಚಿಕಿತ್ಸೆ ವಿಚಾರದಲ್ಲಿ ಈ ರೀತಿ ನಿರ್ಲಕ್ಷ್ಯ ತೋರಿದ್ದು ಖಂಡನೀಯ’ ಎಂದರು.
‘ಮಧುಕರ ಶೆಟ್ಟಿ ಅವರಿಗೆ ನೀಡಲಾದ ಚಿಕಿತ್ಸೆಯ ಕುರಿತಂತೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ನೇಮಿಸಿರುವ ಸಮಿತಿ ಸೂಚಿಸಿದ್ದು, ಡಾ. ದೇವಿಪ್ರಸಾದ್ ಶೆಟ್ಟಿ, ಡಾ. ಪಿ.ಜಿ.ಗಿರೀಶ್ ಅವರನ್ನು ಒಳಗೊಂಡ ಸಮಿತಿಯು ಸದ್ಯದಲ್ಲಿಯೇ ವರದಿ ನೀಡಲಿದೆ. ಚಿಕಿತ್ಸೆಯ ಬಗ್ಗೆ ಅನುಮಾನ ವ್ಯಕ್ತವಾದಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಬೇಕು. ತೆಲಂಗಾಣ ಸರ್ಕಾರವೂ ತನಿಖೆಗೆ ಕೈಜೋಡಿಸಬೇಕು’ ಎಂದರು.
ಮಾತ್ರವಲ್ಲದೆ ರಾಜ್ಯದ ಪೊಲೀಸ್ ತರಭೇತಿ ಸಂಸ್ಥೆಯೊಂದಕ್ಕೆ ಮಧುಕರ್ ಶೆಟ್ಟಿ ಅವರ ಸ್ಮರಣಾರ್ಥ, "ಡಾ|ಮಧುಕರ್ ಶೆಟ್ಟಿ ಪೊಲೀಸ್ ತರಭೇತಿ ಕೇಂದ್ರ " ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.