ಮಂಗಳೂರು,ಮೇ.22 (DaijiworldNews/AK):ದೇಶವನ್ನೇ ತಲ್ಲಣಗೊಳಿಸಿದ್ದ ಬಜ್ಪೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ 14 ವರ್ಷ ಸಂದಿವೆ. ಈ ದುರಂತದಲ್ಲಿ ಮಡಿದವರಿಗೆ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿಮಾನ ದುರಂತದಲ್ಲಿ ಮಡಿದ 158 ಮಂದಿಯ ನೆನಪಿಗಾಗಿ ಕೂಳೂರು ಸೇತುವೆಯಿಂದ ತಣ್ಣೀರು ಬಾವಿ ರಸ್ತೆಗೆ ತಿರುಗುವಲ್ಲಿ ನಿರ್ಮಿಸಲಾದ ಪಾರ್ಕ್ನಲ್ಲಿ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪೊಲೀಸ್ ಅಧಿಕಾರಿಗಳು, ವಿಮಾನ ನಿಲ್ದಾಣದ ಅಧಿಕಾರಿಗಳು ಸೇರಿದಂತೆ ಮಡಿದವರ ಕುಟುಂಬಸ್ಥರು ಭಾಗವಹಿಸಿದರು.
2010ರ ಮೇ 22ರಂದು ಬೆಳಗ್ಗೆ 6:20ಕ್ಕೆ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಹಂತದಲ್ಲಿ ಅಪಘಾತಕ್ಕೀಡಾಗಿ ವಿಮಾನ ವಿಮಾನದಲ್ಲಿದ್ದ 166 ಮಂದಿಯ ಪೈಕಿ 158 ಮಂದಿ ಮೃತಪಟ್ಟಿದ್ದರು. 8 ಮಂದಿ ಬದುಕುಳಿದಿದ್ದರು. ವಿಮಾನ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಗುರುತು ಹಿಡಿಯಲಾಗದ 12 ಮಂದಿಯ ಮೃತದೇಹಗಳನ್ನು ಕುಳೂರಿನ ನದಿ ಕಿನಾರೆಯಲ್ಲಿ ಸಮಾಧಿ ಮಾಡಲಾಗಿತ್ತು. ಅದೇ ಜಾಗದಲ್ಲಿ ದುರಂತದಲ್ಲಿ ಮಡಿದವರ ನೆನಪಿಗಾಗಿ ಪಾರ್ಕ್ ನಿರ್ಮಾಣ ಮಾಡಲಾಗಿದೆ.