ಕುಂದಾಪುರ, ಮೇ 21 (DaijiworldNews/AA): ತಾಲೂಕಿನಲ್ಲಿ ಉಳಿದುಕೊಂಡಿದ್ದ ಏಕಮಾತ್ರ ಟಾಕೀಸ್ ಆಗಿದ್ದ ವಿನಾಯಕ ಚಿತ್ರಮಂದಿರವೂ ಮೇ 2024ಕ್ಕೆ ತನ್ನ ಕೊನೆಯ ಪ್ರದರ್ಶನದೊಂದಿಗೆ ವಿದಾಯ ಹೇಳಿದೆ.
ಕುಂದಾಪುರ ನಗರ ಭಾಗದಲ್ಲಿ ನಾಲ್ಕು ಏಕಪರದೆಯ ಸಿನಿಮಾ ಟಾಕೀಸ್ ಗಳು ಹೌಸ್ ಪುಲ್ ಪ್ರದರ್ಶನ ನೀಡುತ್ತಿದ್ದ ಕಾಲ ವೊಂದಿತ್ತು. ಕುಂದಾಪುರದಲ್ಲಿ ಶನಿವಾರವಂತೂ ಸಿನಿಮಾ ಟಾಕೀಸ್ ತುಂಬಿ ತುಳುಕುತ್ತಿದ್ದ ದಿನಗಳು ಇದ್ದವು. ಕುಂದಾಪುರ ಸಂತೆ ಎಷ್ಟು ಪ್ರಸಿದ್ಧಿ ಪಡೆದಿತ್ತೋ ಆ ದಿನ ಸಂತೆಗೆ ಬಂದವರು ಸಿನಿಮಾ ನೋಡಿಕೊಂಡೇ ಹೋಗುತ್ತಿದ್ದರು.
ಆಧುನಿಕತೆ, ಓಟಿಟಿ, ಮಲ್ಟಿಪ್ಲೇಕ್ಸ್ ಇತ್ಯಾದಿಗಳ ಪ್ರಭಾವ, ಯುವ ಜನತೆ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳತ್ತ ಆಸಕ್ತಿ ಬೆಳೆಸಿಕೊಂಡಿದ್ದರಿಂದ ವಿನಾಯಕ ಟಾಕೀಸ್ ಮುನ್ನೆಸೆಸುವುದು ಸವಾಲಿನ ಸಂಗತಿಯಾಗಿತ್ತು. ಡಾ.ರಾಜ್ ಕುಮಾರ್ ಅವರ ಕವಿರತ್ನ ಕಾಳಿದಾಸ ಪ್ರಥಮ ಚಿತ್ರವಾದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಕೊನೆಯ ಚಿತ್ರವಾಗಿದೆ.
ವಿನಾಯಕ ಟಾಕೀಸ್ ಆರಂಭವಾಗಿದ್ದು 1983ರಲ್ಲಿ. ಕುಂದಾಪುರದ ಕೆ.ರಾಮಚಂದ್ರ ರಾವ್ ಅವರು ಈ ಚಿತ್ರಮಂದಿರವನ್ನು ಆರಂಭಿಸಿದ್ದರು. ಕೆ.ರಾಮಚಂದ್ರ ರಾವ್ ಅವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ ಅರವಿಂದ ಮೋಟಾರ್ಸ್ ಮಂಗಳೂರು ಇದರ ಮಾಲೀಕರಾಗಿದ್ದ ಶ್ರೀಪತಿ ರಾವ್ ಥಿಯೇಟರನ್ನು ಶುಭಾರಂಭಗೊಳಿಸಿದ್ದರು. ಆಗ ಕುಂದಾಪುರ ಕ್ಷೇತ್ರದ ಶಾಸಕರಾಗಿದ್ದ ಕೆ.ಪ್ರತಾಪಚಂದ್ರ ಶೆಟ್ಟಿ, ಬೈಂದೂರು ಕ್ಷೇತ್ರದ ಶಾಸಕರಾಗಿದ್ದ ಬಿ.ಅಪ್ಪಣ್ಣ ಹೆಗ್ಡೆ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನೆಯ ಬಳಿಕ ವರನಟ ಡಾ.ರಾಜ್ ಕುಮಾರ್ ಅವರ ಕವಿರತ್ನ ಕಾಳಿದಾಸ ಚಿತ್ರ ಪ್ರದರ್ಶನಗೊಂಡಿತ್ತು.
ಫಸ್ಟ್ ಕ್ಲಾಸ್ ಸೆಕೆಂಡ್ ಕ್ಲಾಸ್ ಸೇರಿ 250 ಸೀಟು, ಬಾಲ್ಕನಿ 176 ಸೀಟು ಸಾಮಾಥ್ರ್ಯ ಹೊಂದಿತ್ತು. ಆಗ ಟಿಕೆಟ್ ಬೆಲೆ ಪಸ್ಟ್ ಕ್ಲಾಸಿಗೆ 2.80 ಪೈಸೆ, ಬಾಲ್ಕನಿಗೆ 3.25 ಪೈಸೆ ಇತ್ತು. ಚಿತ್ರಮಂದಿರ ಸ್ತಗಿತಗೊಳ್ಳುವ ಹೊತ್ತಿಗೆ ಟಿಕೆಟ್ ಬೆಲೆ ಪಸ್ಟ್ ಕ್ಲಾಸಿಗೆ ೮೦ ರೂ. ಬಾಲ್ಕನಿಗೆ 100 ರೂ.ಆಗಿತ್ತು.
ಕೆ.ರಾಮಚಂದ್ರ ರಾವ್ ಕನಸಿನ ವಿನಾಯಕ ಚಿತ್ರಮಂದಿರವನ್ನು ಅವರ ನಂತರ ಸಮರ್ಥವಾಗಿ ಮುನ್ನಡೆಸಿದ್ದು ಅವರ ಪುತ್ರ ಪುಷ್ಪರಾಜ್ ಅವರು. ಸುಮಾರು 41 ವರ್ಷಗಳ ಕಾಲ ಚಿತ್ರರಸಿಕರಿಗೆ ಮನೋರಂಜನೆ ನೀಡಿದ ಈ ಥಿಯೇಟರ್ ಆನೇಕ ಏಳು-ಬೀಳುಗಳನ್ನು ಕಂಡಿತ್ತು. ನಷ್ಟದ ಸಂದರ್ಭದಲ್ಲಿಯೂ ಮುನ್ನಡೆಸಿದ್ದು ಪುಷ್ಪರಾಜ್ ಅವರು. ಆದರೆ ಈಗ ಅನಿವಾರ್ಯವಾಗಿ ಥಿಯೇಟರ್ ಅನ್ನು ಮುಚ್ಚಲೆ ಬೇಕಾದ ಅನಿವಾರ್ಯ ಸ್ಥಿತಿಗೆ ಅವರು ವಿಷಾದ ವ್ಯಕ್ತಪಡಿಸುತ್ತಾರೆ.
ನಮ್ಮ ತಂದೆಯವರು ಆಗ ಥಿಯೇಟರ್ ಮಾಡುವಾಗ 30 ಲಕ್ಷ ವೆಚ್ಚವಾಗಿತ್ತು ಕಟ್ಟಡ ಕೆಲಸ ನಡೆಯುತ್ತಿರುವಾಗ ನಾನು ತಂದೆಯೊAದಿಗೆ ಕಾಂಕ್ರೀಟಿಗೆ ನೀರು ಹಾಕಲು ಸೈಕಲ್ನಲ್ಲಿ ಬರುತ್ತಿದ್ದೆ. ನಾವು ಕೆಲಸ ಮಾಡುತ್ತಿದ್ದೇವು. ಆಗ ಸೀಟುಗಳು ಹರಿದು ಹೋದಾಗ ದುರಸ್ತಿ, ಮಾಡುವುದು ಇತ್ಯಾದಿ ಕೆಲಸಗಳನ್ನು ತಂದೆ ಮಗ ಮಾಡುತ್ತಿದ್ದೇವು. ಪ್ರಾಜೆಕ್ಟರ್ ರೂಮಿನಿಂದ ಅಪರೇಟಿಂಗ್ ಮಾಡುವುದು, ಟಿಕೇಟು ಕೊಡುವುದು ಹೀಗೆ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಡಾ.ರಾಜ್ ಕುಮಾರ್ ಅವರು ಬಹುತೇಕ ಎಲ್ಲ ಚಿತ್ರಗಳನ್ನು ಇಲ್ಲಿ ಹಾಕಿದ್ದೇವೆ. ಒಳ್ಳೆಯ ಕಲೆಕ್ಷನ್ ಆಗಿದೆ. ಕೊರೋನಾ ನಂತರ ಜನ ಥಿಯೇಟರ್ಗೆ ಬರುವುದು ನಿಂತು ಹೋಯಿತು. ಈಗ ಅನಿವಾರ್ಯವಾಗಿ ಥಿಯೇಟರ್ ಸ್ತಗಿತಮಾಡಬೇಕಾಯಿತು.
-ಪುಷ್ಪರಾಜ, ವಿನಾಯಕ ಚಿತ್ರಮಂದಿರದ ಮಾಲಿಕರು.