ಬಂಟ್ವಾಳ, ಮೇ. 21(DaijiworldNews/AK):ತಾಲೂಕಿನ ಮಂಚಿ ಸಮೀಪದ ಮೋಂತಿಮರದ ಕಾರ್ಯಪಡ್ಪು ಎಂಬಲ್ಲಿ ಕಾರೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮಾಜಿ ಸೈನಿಕ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಸ್ಕೂಟರ್ಗೆ ಡಿಕ್ಕಿ ಹೊಡೆದ ನಂತರ ಕಾರು ಸ್ಥಳದಿಂದ ಪರಾರಿಯಾಗಿದೆ.
ಪುತ್ತೂರು ನೆಹರು ನಗರದ ಶ್ರೀ ರಕ್ತೇಶ್ವರಿ ಗುಡಿ ಬಳಿಯ ನಿವಾಸಿ ಚಿದಾನಂದ ಕಾಮತ್ (55) ಮೃತ ವ್ಯಕ್ತಿ. ಸಾಲೆತ್ತೂರಿನಿಂದ ಮುಡಿಪುವಿಗೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಕಾರು ಚಾಲಕ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಕಾಮತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಿಲಿಟರಿಯಿಂದ ನಿವೃತ್ತರಾದ ನಂತರ ಅವರು ಇನ್ಫೋಸಿಸ್ ಮುಡಿಪುನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಅವಿವಾಹಿತರಾಗಿದ್ದು, ತಾಯಿಯೊಂದಿಗೆ ವಾಸಿಸುತ್ತಿದ್ದರು.
ಅಪಘಾತ ಮಾಡಿದ ನಂತರ ಕಾರು ಸ್ಥಳದಿಂದ ಪರಾರಿಯಾಗಿದೆ. ಬಂಟ್ವಾಳ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರನ್ನು ಪತ್ತೆ ಹಚ್ಚುತ್ತಿದ್ದಾರೆ.