ಉಡುಪಿ, ಮೇ. 21(DaijiworldNews/AK):ಹೊಸ ಶೈಕ್ಷಣಿಕ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯಾದ್ಯಂತ ಸರಕಾರಿ ಶಾಲೆಗಳನ್ನು ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಎಂಎಲ್ಸಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಧು ಮಾತನಾಡಿ, , ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕರ್ನಾಟಕದ 500 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆಗಿ ಮೇಲ್ದರ್ಜೆಗೇರಿಸಲಾಗುವುದು. ಇದಕ್ಕಾಗಿ ಸಿಎಸ್ಆರ್ ನಿಧಿ ಸಂಗ್ರಹಿಸಲಾಗುತ್ತಿದೆ. ಆ ಜವಾಬ್ದಾರಿಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಹೊರಲಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಇನ್ನೂ 3000 ಕೆಪಿಎಸ್ ಶಾಲೆಗಳು ಕಾರ್ಯಾರಂಭ ಮಾಡಲಿವೆ ಎಂದರು.
ಈ ವರ್ಷ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಅವರ ಕಲ್ಯಾಣಕ್ಕಾಗಿ 20% ಗ್ರೇಸ್ ಅಂಕಗಳನ್ನು ನೀಡಲಾಗಿದೆ. ಇದು ಈ ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗಳಿಗೆ ಯಾವುದೇ ಗ್ರೇಸ್ ಮಾರ್ಕ್ ಇರುವುದಿಲ್ಲ ಎಂದರು.
ಅಶೋಕ್ ಕುಮಾರ್ ಕೊಡವೂರು, ಮಂಜುನಾಥ ಭಂಡಾರಿ, ಎಂ ಎ ಗಫೂರ್, ಮಮತಾ ಗಟ್ಟಿ, ಕೆ ಜಯಪ್ರಕಾಶ್ ಹೆಗ್ಡೆ, ಕಿಶನ್ ಹೆಗ್ಡೆ, ಪಿ ಎಂ ಶಾಹಿದ್, ಪಿ ಎಂ ಮಹಮ್ಮದ್, ವೆರೋನಿಕಾ ಕರ್ನೇಲಿಯೋ, ಆಯನೂರು ಮಂಜುನಾಥ, ಕೆ ಕೆ ಮಂಜುನಾಥ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.