ಕೊಣಾಜೆ, ಮೇ. 21(DaijiworldNews/AK): ರಸ್ತೆ ಬದಿಯ ತ್ಯಾಜ್ಯ ಸಮಸ್ಯೆಯಿಂದ ಬೇಸತ್ತ ಗ್ರಾ.ಪಂ ಆಡಳಿತ ಸಿ.ಸಿ ಟಿವಿ ಅಳವಡಿಸಿದ ದಿನದಂದೇ ಕೇರಳ ನೋಂದಾಯಿಸಲ್ಪಟ್ಟ ಕಾರಿನಲ್ಲಿ ತ್ಯಾಜ್ಯವನ್ನು ತಂದು ರಸ್ತೆಬದಿಯಲ್ಲೇ ಎಸೆದು ಹೋಗಿರುವ ಘಟನೆ ಮಂಜನಾಡಿ ಗ್ರಾಮದ ಬಟ್ಯಡ್ಕ ನಿವೇಶನದ ಬಳಿ ಸೆರೆಯಾಗಿದೆ.
ಕರ್ನಾಟಕ- ಕೇರಳ ಸಂಪರ್ಕಿಸುವ ರಸ್ತೆ ಇದಾಗಿರುವುದರಿಂದ ಕೇರಳ ಭಾಗದಿಂದ ತ್ಯಾಜ್ಯ ತಂದು ಇಲ್ಲಿ ಎಸೆಯಲಾಗುತ್ತಿದೆಯೇ ಅನ್ನುವ ಅನುಮಾನ ವ್ಯಕ್ತವಾಗಿದೆ.
ಕೇರಳ ನೋಂದಾಯಿತ Kl 14AB3823 ಟಾಟಾ ಆಲ್ಟ್ರೋಝ್ ಕಾರಿನಲ್ಲಿ ತ್ಯಾಜ್ಯ ತಂದ ಆರೋಪಿ ಬಟ್ಯಡ್ಕ ನಿವೇಶನಗಳಿರುವ ಸಮೀಪ ಕಾರು ನಿಲ್ಲಿಸಿ ತ್ಯಾಜ್ಯ ಎಸೆದು ಪರಾರಿಯಾಗಿದ್ದಾನೆ.
ಈ ಭಾಗದಲ್ಲಿ ರಸ್ತೆಬದಿಯಲ್ಲಿ ತ್ಯಾಜ್ಯ ಎಸೆಯುವ ಪರಿಣಾಮ ಮಾಲಿನ್ಯ ಉಂಟಾಗಿ ಸ್ಥಳೀಯರು ಗ್ರಾ.ಪಂ.ಗೆ ವ್ಯಾಪಕವಾಗಿ ದೂರುಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇ.19 ರಂದು ಸಿಸಿಟಿವಿಯನ್ನು ಗ್ರಾ.ಪಂ ಅಳವಡಿಸಿತ್ತು. ಅಂದೇ ತ್ಯಾಜ್ಯ ಎಸೆಯುವವರ ಕೃತ್ಯ ಬಯಲಾಗಿದೆ. ಈ ಕುರಿತು ಮಂಜನಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ.