ಕಾರ್ಕಳ, ಮೇ 20(DaijiworldNews/AK): ಉಡುಪಿ ಜಿಲ್ಲಾಡಳಿತ ಕುರುಡುತನ ಪ್ರದರ್ಶಿಸುತ್ತಿದೆ. ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿ ದೂರು ನೀಡಿದ್ದರೂ ಸಕಾರಾತ್ಮಕ ವಾಗಿ ಸ್ವಂದಿಸದೇ ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕಾರ್ಕಳ ಪುರಸಭಾ ಸದಸ್ಯ ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಾರ್ಕಳ ಪುರಸಭಾ ಸದಸ್ಯ ಶುಭದರಾವ್, ಐತಿಹಾಸಿಕ ಹಿನ್ನಲೆಯುಳ್ಳ ರಾಮಸಮುದ್ರ ಪರಿಸರ ನೈರ್ಮಲ್ಯ ಹಾಳಾಗುತ್ತಿದೆ.
ಕಾರ್ಕಳ ಪುರಸಭಾ ಜನತೆಗೆ ಸಮಗ್ರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ರಾಮಸಮುದ್ರ ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನಲ್ಲೆಯುಳ್ಳದಾಗಿದೆ.
ಇದರ ಪರಿಸರದಲ್ಲಿ ಭಾರೀ ಗಾತ್ರದ ಕಬ್ಬಿಣ ಪೈಪ್ ಗಳಿಗೆ ಸಿಮೆಂಟ್ ಹೊದಿಕೆ ನಿರ್ಮಾಣದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಕಡುಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿಗೆ ತಾತ್ವಾರ ಎದುರಾಗಿದ್ದರೂ, ಮೇಲಿನ ಕಾಮಗಾರಿಗೆ ರಾಮಸಮುದ್ರದ ಕುಡಿಯುವ ನೀರನ್ನೇ ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು.
ಈ ಹಿನ್ನಲ್ಲೆಯಲ್ಲಿ ಕಾರ್ಕಳ ಪುರಸಭೆ ಮುಖ್ಯಾಧಿಕಾರಿ, ಆಡಳಿತಾಧಿಕಾರಿ ಹಾಗೂ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಲಿಖಿತ ದೂರು ಸಲ್ಲಿಸಿದರೂ ಪೈಪ್ ನಿರ್ಮಾಣದ ಕಾಮಗಾರಿ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಕಾರ್ಕಳ ಪುರಸಭಾ ಸದಸ್ಯ ಶುಭದರಾವ್ ಆರೋಪಿಸಿದ್ದಾರೆ.
ಊರಿನಲ್ಲಿ ನೀರಿನ ಸಮಸ್ಯೆ ಸ್ಪಂದಿಸಿ ಅನೇಕ ಸಂಘ ಸಂಸ್ಥೆಗಳು ಟ್ಯಾಂಕರ್ ಮೂಲಕ ನೀರನ್ನು ಪೂರೈಕೆ ಮಾಡುತ್ತಿದೆ. ಆದರೆ ಅನಧಿಕೃತ ನೀರಿನ ಬಳಕೆ ತಡೆಯಲು ಪುರಸಭೆ ಹಾಗೂ ಜಿಲ್ಲಾಡಳಿತಕ್ಕೂ ಸಾಧ್ಯವಾಗದಿರುವುದು ಆಶ್ಚರ್ಯವಾಗಿದೆ.
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಅಹಾಕಾರ ಎದುರಾಗಿದ್ದರೂ ಅಕ್ರಮ ಕಾಮಗಾರಿಗೆ ಯಥೇಚ್ಛ ಕುಡಿಯುವ ನೀರು ದುರ್ಬಳಕೆ ಮಾಡುತ್ತಿದ್ದರೂ ಕಾರ್ಕಳ ಪುರಸಭಾ ಆಡಳಿತ ಹಾಗೂ ಜಿಲ್ಲಾಡಳಿವು ಮೌನಕ್ಕೆ ಶರಣಾಗಿರುವ ಕುರಿತು ಕಾರ್ಕಳ ಪುರಸಭಾ ಸದಸ್ಯ ಖೇದ ವ್ಯಕ್ತಪಡಿಸಿದ್ದಾರೆ.
ತಕ್ಷಣದಿಂದ ಕಾಮಗಾರಿ ನಿಲ್ಲಿಸುವಂತೆ ಅವರು ಆಗ್ರಹಿಸಿದ್ದಾರೆ.ಉಡುಪಿ ಜಿಲ್ಲೆಗೆ ಸಂಬಂಧಿಸದ ಕಾಮಗಾರಿ ವಹಿಸಿಕೊಂಡ ಕಂಟ್ರಾಕ್ಟರ್ ದಾರರೊಬ್ಬರು ಕಬ್ಬಿಣದ ಪೈಪ್ ಗೆ ಹೊರಭಾಗದಲ್ಲಿ ಸಿಮೆಂಟ್ ಹೊದಿಕೆ ಸಿದ್ಧ ಪಡಿಸಲು ಐತಿಹಾಸಿಕ ರಾಮಸಮುದ್ರ ಪರಿಸರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಕಾಮಗಾರಿಗಾಗಿ ರಾಮಸಮುದ್ರದ ಕುಡಿಯುವ ನೀರನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ. ಇದರಿಂದ ರಾಮಸಮುದ್ರದ ನೀರು ಕಲಷಿತಗೊಳ್ಳಲಿದೆ.
ಕೆಲವು ವಾರ್ಡಗಳಲ್ಲಿ ದಿನ ಬಳಕೆ ಹಾಗೂ ಕುಡಿಯುವ ನೀರಿಗೂ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಬೇರೆ ಯಾವುದೋ ಜಿಲ್ಲೆಯ ಕಾಮಗಾರಿಯನ್ನು ವಹಿಸಿಕೊಂಡ ಗುತ್ತಿಗೆದಾರ ರಾಮಸಮುದ್ರಕ್ಕೆ ಅಕ್ರಮವಾಗಿ ಪಂಪ್ ಅಳವಡಿಸಿ ತನ್ನ ಕಾಮಗಾರಿಗಳಿಗೆ ಯಥೇಚ್ಛವಾಗಿ ನೀರು ಬಳಸುತ್ತಿದ್ದು ಅದನ್ನು ತಕ್ಷಣ ನಿಲ್ಲಿಸುವಂತೆ ಮತ್ತು ಈ ಬಗ್ಗೆ ಕ್ರಮ ಜರುಗಿಸುವಂತೆ ಜಿಲ್ಲಾದಿಕಾರಿಯವರನ್ನು ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.
ಈ ಅಕ್ರಮ ಕಾಮಗಾರಿಯ ಬಗ್ಗೆ ಜಲಮಂಡಲಿಯ ಅಧಿಕಾರಿಗಳು, ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳಲ್ಲಿ ಸಾರ್ವಜನಿಕರು ಎಷ್ಟೇ ದೂರು ಸಲ್ಲಿಸಿದರೂ ಅವರ ನಿರ್ಲಕ್ಷ್ಯ ಮತ್ತು ಮೌನ ಅನೇಕ ಸಂಶಯಗಳಿಗೆ ಅವಕಾಶ ಮಾಡಿಕೊಟ್ಟಿದೆ. ಪುರಸಭಾ ವ್ಯಾಪ್ತಿಯ ನೀರಿನ ಸಮಸ್ಯೆಯ ಗಂಭೀರತೆಯ ಬಗ್ಗೆ ಸಂಪುರ್ಣ ಮಾಹಿತಿ ಇದ್ದರೂ ಅಕ್ರಮ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕಾಗಿ ಮನವಿಯಲ್ಲಿ ಆಗ್ರಹಿಸಿದ್ದಾರೆ.