ಮಂಗಳೂರು, ಮೇ 20(DaijiworldNews/AA): ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಬಿಜೆಪಿಯ ಯುವಮೋರ್ಚಾ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಕಾನೂನು ಕ್ರಮ ಕೈಗೊಂಡಿರುದ್ದಾರೆ. ಆದರೆ ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಗೂಂಡಾ ವರ್ತನೆ ತೋರಿದ್ದು, ಇದು ಅಕ್ಷಮ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ ಎದುರು ಹರೀಶ್ ಪೂಂಜಾ ಅವರು ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಅವರು, ಹರೀಶ್ ಪೂಂಜ ಅವರು ಅಕ್ರಮ ಲೂಟಿಕೋರರ ಪರ ನಿಂತು ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ಪೊಲೀಸರ ವಿರುದ್ಧವೇ ಗೂಂಡಾ ವರ್ತನೆ ತೋರಿದ್ದಾರೆ. ಸಮಾಜದ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿ ಇಲ್ಲ. ಶಾಸಕರಾಗಿ ಪೊಲೀಸರ ಕಾರ್ಯಕ್ಕೆ ಅಡ್ಡಿ ಪಡಿಸಿ ಈ ರೀತಿ ಗೂಂಡಾಗಿರಿ ತೋರಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಸ್ವತಃ ಬಿಜೆಪಿ ಶಾಸಕರೇ ಮುಂದೆ ನಿಂತು ಸರ್ಕಾರಿ ಅಧಿಕಾರಿಗಳಿಗೆ ಕಾನೂನಾತ್ಮಕವಾಗಿ ಕೆಲಸ ಮಾಡಲು ಅಡ್ಡಿಪಡಿಸುವ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಮಾಜಘಾತುಕರ ಪರ ನಿಂತು ಬಿಜೆಪಿ ಶಾಸಕರು ರಾಜಕಾರಣ ಮಾಡುತ್ತಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.