ಬೆಳ್ತಂಗಡಿ, ಮೇ. 19(DaijiworldNews/AA): ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಂತಬೆಟ್ಟು ಎಂಬಲ್ಲಿ ನಡೆಯುತ್ತಿದ್ದ, ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಗಣಿಗಾರಿಕೆಗಾಗಿ ಶೇಖರಿಸಲಾಗಿದ್ದ, ಅಪಾಯಕಾರಿ ಸ್ಪೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ ಪ್ರಮೋದ್ ಉಜಿರೆ ಹಾಗೂ ಶಶಿರಾಜ್ ಶೆಟ್ಟಿ ಎಂಬವರುಗಳ ವಿರುದ್ಧ, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಇಬ್ಬರು ಆರೋಪಿಗಳ ಪೈಕಿ ಶಶಿರಾಜ್ ಶೆಟ್ಟಿ ವಶಕ್ಕೆ ಪಡೆಯಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಪ್ರಮುಖ ಆರೋಪಿ ಹಾಗೂ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿರುವ ಶಶಿರಾಜ್ ಪರವಾಗಿ ಹರೀಶ್ ಪೂಂಜಾರವರು, ತಮ್ಮ ಬೆಂಬಲಿಗರೊಂದಿಗೆ ಶನಿವಾರ ತಡರಾತ್ರಿ ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿ, ಆರೋಪಿಯು ಶಾಸಕರ ಪಕ್ಷದ ಕಾರ್ಯಕರ್ತನಾಗಿದ್ದು, ಆತನನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿದ್ದಾರೆ. ಅಷ್ಟೇ ಅಲ್ಲದೆ ಅವ್ಯಾಚವಾಗಿ ಬೈದು ಬೆದರಿಸಿದ್ದು, ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಜೊತೆಗೆ ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ, ದುರ್ವರ್ತನೆ ತೋರಿರುತ್ತಾರೆ ಎನ್ನಲಾಗಿದೆ. ಈ ಹಿನ್ನೆಲೆ ಹರೀಶ್ ಪೂಂಜಾರವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353, 504ರಂತೆ ಪ್ರಕರಣ ದಾಖಲಾಗಿದೆ.