ಬೆಳ್ತಂಗಡಿ, ಮೇ 19(DaijiworldNews/AA): ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವಮೋರ್ಚಾ ಮುಖಂಡನಿ ಶಶಿರಾಜ್ ಶೆಟ್ಟಿಗೆ ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಅಕ್ರಮ ಗಣಿಗಾರಿಕೆ ಬಗ್ಗೆ ಬೆಳ್ತಂಗಡಿ ತಾಲೂಕು, ತಹಶೀಲ್ದಾರರಾದ ಪೃಥ್ವಿ ಸಾನಿಕಂ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೇ 18 ರಂದು ಬೆಳ್ತಂಗಡಿ ತಾಲೂಕು ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ, ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ, ದೂರುದಾರರು, ಗ್ರಾಮ ಸಹಾಯಕ, ತಾಲೂಕು ಕಛೇರಿ ಸಿಬ್ಬಂದಿಯವರು, ಬೆಳ್ತಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕರು ದಾಳಿ ನಡೆಸಿರುತ್ತಾರೆ.
ಈ ವೇಳೆ ಸ್ಥಳದಲ್ಲಿ ಅಕ್ರಮ ಗಾಣಿಗಾರಿಕೆಯಿಂದ ತೆಗೆದಿರುವ ಕಲ್ಲುಗಳ ರಾಶಿ, ಹಿಟಾಚಿ-1, ಟ್ರಾಕ್ಟರ್-1, ಜೀವಂತ ಮದ್ದುಗುಂಡು 4 ಹಾಗೂ ಬಳಕೆಯಾಗಿರುವ 4 ಮದ್ದುಗುಂಡು ಪತ್ತೆಯಾಗಿದೆ. ಬಳಿಕ ಸ್ಥಳದಲ್ಲಿದ್ದ ಕಾರ್ಮಿಕರನ್ನು ವಿಚಾರಣೆ ನಡೆಸಿದಾಗ ಆರೋಪಿಗಳಾದ ಪ್ರಮೋದ್ ಉಜಿರೆ ಹಾಗೂ ಶಶಿರಾಜ್ ಎಂಬವರುಗಳು ಈ ಅಕ್ರಮ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಸ್ಥಳದಲ್ಲಿದ್ದ ಸ್ಪೋಟಕಗಳನ್ನು ಹಾಗು ಇತರೆ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೇ ಆರೋಪಿಗಳಾದ ಪ್ರಮೋದ್ ಉಜಿರೆ ಹಾಗೂ ಶಶಿರಾಜ್ ಎಂಬವರುಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಶಶಿರಾಜ್ ಎಂಬಾತನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿರುತ್ತದೆ. ಮತ್ತೋರ್ವ ಆರೋಪಿ ಪರಾರಿಯಾಗಿರುತ್ತಾನೆ.