ಬೆಳ್ತಂಗಡಿ, ಮೇ. 19(DaijiworldNews/AA): ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ, ರೌಡಿ ಶೀಟರ್ ಶಶಿರಾಜ್ ಶೆಟ್ಟಿಯನ್ನು ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ಶಾಸಕ ಹರೀಶ್ ಪೂಂಜಾ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರನ್ನು ನಿಂದಿಸಿ ಬೆದರಿಕೆ ಹಾಕಿದ್ದು, ಬಿಜೆಪಿ ಕಾರ್ಯಕರ್ತರೊಂದಿಗೆ ಪೊಲೀಸ್ ಠಾಣೆಯಲ್ಲಿ ಶನಿವಾರ ತಡರಾತ್ರಿ ಧರಣಿ ನಡೆಸಿದ್ದಾರೆ.
ನಮ್ಮ ಕಾರ್ಯಕರ್ತ ಯಾರನ್ನೂ ಕೊಲೆ ಮಾಡಿಲ್ಲ ಅಥವಾ ಅತ್ಯಾಚಾರ ಮಾಡಿಲ್ಲ. ರಾತ್ರಿಯಲ್ಲಿ ಅವನನ್ನು ಅವನ ಮನೆಯಿಂದ ಏಕೆ ಕರೆತಂದಿದ್ದೀರಿ? ಯಾವ ಎಫ್ಐಆರ್ ದಾಖಲಾಗಿದೆ? ದಾಳಿ ನಡೆಸಿದಾಗ ಸ್ಥಳದಲ್ಲಿದ್ದವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆ ಜಮೀನಿನ ಮಾಲೀಕರು ಬಂಧಿತ ಕಾರ್ಯಕರ್ತನ ಹೆಸರು ಹೇಳಿದ್ದಾರಾ? ಆತನನ್ನು ತನ್ನ ಮನೆಯಿಂದ ಮಹಿಳೆಯರ ಮುಂದೆ ಎಳೆದು ತಂದ ಅಪರಾಧವೇನು? ಪೊಲೀಸ್ ಠಾಣೆ ನಿಮ್ಮ ತಂದೆಯ ಆಸ್ತಿಯೇ ಎಂದು ಇನ್ಸ್ಪೆಕ್ಟರ್ ಅವರನ್ನು ಏರುದನಿಯಲ್ಲಿ ಹರೀಶ್ ಪೂಂಜಾ ಅವರು ಪ್ರಶ್ನಿಸಿದ್ದಾರೆ.
ನೀವು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದೀರಿ. ನೀವು ಯಾರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ ಎಂದು ನೀವು ತಲೆ ಕೆಡಿಸಿಕೊಂಡಿದ್ದೀರಿ ಎಂದು ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ನಮ್ಮ ಕಾರ್ಯವಿಧಾನದ ಅನುಸಾರ ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದಾಗ, ಹರೀಶ್ ಪೂಂಜಾ ಅವರು ನಿಮಗಿಂತ ನಿಮ್ಮ ಕಾರ್ಯವಿಧಾನ ನನಗೆ ಹೆಚ್ಚು ತಿಳಿದಿದೆ. ನೀವು ಈಗ ಎಫ್ಐಆರ್ ಮಾಡಿದ್ದೀರಿ. ಯಾರ ಒತ್ತಡದಲ್ಲಿ ಎಫ್ಐಆರ್ ಮಾಡಿದ್ದೀರಿ. ಯಾರ ಒತ್ತಡಕ್ಕೆ ಮಣಿದು ಇದನ್ನೆಲ್ಲಾ ಮಾಡ್ತಿದ್ದೀರೋ ನನಗೆ ಗೊತ್ತು. ಎಸ್ಪಿ, ತಹಶೀಲ್ದಾರ್ ಫೋನ್ ತೆಗೆದುಕೊಳ್ಳುತ್ತಿಲ್ಲ. ಪೊಲೀಸ್ ಠಾಣೆ ನಿಮ್ಮ ತಂದೆಯ ಆಸ್ತಿಯಲ್ಲ. ಅದು ಸಾರ್ವಜನಿಕ ಆಸ್ತಿ. ನೀವು ನಮ್ಮ ಕಾರ್ಯಕರ್ತನನ್ನು ಬಿಡುಗಡೆ ಮಾಡದಿದ್ದರೆ, ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ಪಟ್ಟು ಹಿಡಿದು ಕುಳಿತಿದ್ದಾರೆ.
ಮಧ್ಯರಾತ್ರಿ 1 ಗಂಟೆವರೆಗೆ ಪೂಂಜಾ ತಮ್ಮ ಕಾರ್ಯಕರ್ತರೊಂದಿಗೆ ಪೊಲೀಸ್ ಠಾಣೆಯಲ್ಲಿ ಕುಳಿತು ಧರಣಿ ನಡೆಸಿದ್ದಾರೆ. ಪೂಂಜಾ ಹಾಗೂ ಅವರ ಬೆಂಬಲಿಗರು ಪೊಲೀಸರ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ. ಆದರೆ ಪೊಲೀಸರು ಮಾತ್ರ ಇವರ ಧರಣಿಯಿಂದ ಕಾರ್ಯಕರ್ತನನ್ನು ಬಿಡುಗಡೆ ಮಾಡಲಿಲ್ಲ ಎಂದು ತಿಳಿದುಬಂದಿದೆ.