ಕುಂದಾಪುರ,ಮೇ.19(DaijiworldNews/AK): ನಾಲ್ಕು ದಿನಗಳ ಹಿಂದೆ ಮನೆಯಲ್ಲಿಯೇ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಶವದ ಜೊತೆಯಲ್ಲಿ 32 ವರ್ಷದ ವಿಶೇಷಚೇತನ ಮಗಳು ಅನ್ನ ಆಹಾರವಿಲ್ಲದೇ ಹಾಗೇ ಮಲಗಿಕೊಂಡ ಸ್ಥಿತಿಯಲ್ಲಿದ್ದ ಘಟನೆ ಗುರುವಾರ ತಡರಾತ್ರಿ ಮೂಡುಗೋಪಾಡಿಯ ದಾಸನಹಾಡಿಯಲ್ಲಿ ಎಂಬಲ್ಲಿ ನಡೆದಿದ್ದು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಶನಿವಾರ ಮೃತಪಟ್ಟಿದ್ದಾರೆ.
ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಗೋಪಾಡಿ ದಾಸನಹಾಡಿ ಎಂಬಲ್ಲಿನ ವಾಸವಿದ್ದ ಜಯಂತಿ ಶೆಟ್ಟಿ (62) ಮನೆಯಲ್ಲಿ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರಕ್ಷಿಸಲ್ಪಟ್ಟ ಇವರ ಮಗಳು ಪ್ರಗತಿ ಶೆಟ್ಟಿ ಶನಿವಾರ ಮಾಧ್ಯಾಹ್ನದ ವೇಳೆಗೆ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಮೂಲತಃ ಹೆಂಗವಳ್ಳಿಯವರಾದ ಈ ಕುಟುಂಬ ಕಳೆದ ಒಂದೂವರೆ ದಶಕಗಳಿಂದ ಮೂಡುಗೋಪಾಡಿಯಲ್ಲಿ ನೆಲೆಸಿದ್ದು ಜಯಂತಿಯವರ ಪತಿ ನಿಧನರಾದ ಬಳಿಕ ತಾಯಿ-ಮಗಳು ವಾಸವಿದ್ದರು.
ಜಯಂತಿ ಶೆಟ್ಟಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು ವೈದ್ಯಕೀಯ ಚಿಕಿತ್ಸೆ ಪಡೆಯುತಿದ್ದರು. ಇದಲ್ಲದೇ ಮಗಳು ಹುಟ್ಟಿನಿಂದಲೇ ಬುದ್ಧಿಮಾಂಧ್ಯರಾಗಿದ್ದು ಇತ್ತೀಚಿನ ದಿನದಲ್ಲಿ ಮಗಳಾದ ಪ್ರಗತಿಯವರ ಶುಗರ್ ಸಮಸ್ಯೆಯಿಂದ ಒಂದು ಕಾಲು ಕತ್ತರಿಸಲಾಗಿತ್ತು. ಸಂಕಷ್ಟದ ನಡುವೆ ತಾಯಿ ಮಗಳನ್ನು ಮುದ್ದಾಗಿ ಸಾಕಿ ಜೀವನ ನಡೆಸುತ್ತಿದ್ದರು.
ಘಟನೆ ವಿವರ: ಮೇ.12ರಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ತೆರಳಿ ಮಗಳ ಆರೋಗ್ಯ ಚೇತರಿಕೆಗಾಗಿ ವಿಶೇಷ ಸೇವೆಗಳನ್ನು ಮಾಡಿಸಿ ಮೇ.೧೩ರಂದು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲು ಸ್ಥಳೀಯ ಆಟೋ ರಿಕ್ಷಾ ಚಾಲಕನಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಇದರಂತೆ ಅಟೋ ಚಾಲಕ ಮೇ.೧೩ ರಂದು ದೇವಳಕ್ಕೆ ತೆರಳುವ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದೇ ಇದ್ದಾಗ ಚಾಲಕ ಸುಮ್ಮನಾಗಿದ್ದರು. ಬಳಿಕ ಮೂರು ದಿನಗಳು ಕಳೆದರೂ ಕೂಡ ಗೇಟ್ ಸೇರಿದಂತೆ ಮನೆಯ ಹಿಂಭಾಗ ಮತ್ತು ಮುಂಭಾಗದ ಬಾಗಿಲುಗಳನ್ನು ಮುಚ್ಚಿಕೊಂಡಿದ್ದವು. ಹಾಗೂ ಮನೆಯ ಎಲ್ಲಾ ಕೊಠಡಿಗಳ ಲೈಟ್ಗಳು ಹಗಲಿನಲ್ಲಿಯೂ ಉರಿಯುತ್ತಿದ್ದದ್ದನ್ನು ಕಂಡು ಸ್ಥಳೀಯರು ಎಲ್ಲಿಗಾದರೂ ಹೋಗಿರಬಹುದು ಎಂದು ಸುಮ್ಮನಿದ್ದರು.
ಈ ಸಂದರ್ಭ ಗುರುವಾರ ರಾತ್ರಿ ವೇಳೆ ಮನೆಯ ಸಮೀಪ ದುರ್ವಾಸನೆ ಬರುತ್ತಿದ್ದದ್ದನ್ನು ಗಮನಿದ ನೆರೆಹೊರೆಯವರು ಜಯಂತಿ ಶೆಟ್ಟಿ ಇವರ ಮೊಬೈಲ್ಗೆ ಕರೆ ಮಾಡಿದಾಗ ಮೊಬೈಲ್ ಮನೆಯಲ್ಲಿಯೇ ರಿಂಗ್ಗಣಿಸುತ್ತಿತ್ತು. ಆದರೆ ಮೊಬೈಲ್ ರೀಸಿವ್ ಮಾಡುತ್ತಿರಲಿಲ್ಲ. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯರು ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಇವರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಸುರೇಶ್ ಶೆಟ್ಟಿ ಸ್ಥಳೀಯರೊಂದಿಗೆ ಮನೆಯ ಸುತ್ತಮುತ್ತ ಹುಡುಕಾಡಿ ಕಿಟಕಿಯಲ್ಲಿ ನೋಡಿದಾಗ ಮಗಳು ಸಂಪೂರ್ಣ ನಿತ್ರಾಣಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿದ್ದ ದೃಶ್ಯ ಕಂಡು ಸ್ಥಳೀಯರು ದಂಗಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಉಪನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಸಿಬ್ಬಂದಿಗಳು ಮನೆಯ ಬಾಗಿಲನ್ನು ಸ್ಥಳೀಯರ ಸಹಕಾರದಿಂದ ಮುರಿದು ಒಳಹೊಕ್ಕಿ ಯುವತಿಯನ್ನು ಪರಿಶೀಲಿಸಿದಾಗ ತೀವ್ರ ನಿತ್ರಾಣಗೊಂಡ ಸ್ಥಿತಿಯಲ್ಲಿದ್ದರು. ತಕ್ಷಣವೇ ಪಿಎಸ್ಐ ಯುವತಿಗೆ ಉಪಚರಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ್ದು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸಿದೆ ಪ್ರಗತಿ ಕೊನೆಯುಸಿರೆಳೆದಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಗೋಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿಯವರು ಜಯಂತಿ ಶೆಟ್ಟಿಯವರ ಸಂಬಂಧಿಕರನ್ನು ಪತ್ತೆಹಚ್ಚಿ ಅವರನ್ನು ಸ್ಥಳಕ್ಕೆ ಕರೆಸಿ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರಿಗೆ ನೆರವಾದರು. ಮರಣೋತ್ತರ ಪರೀಕ್ಷೆ ಬಳಿಕ ಶುಕ್ರವಾರ ಜಯಂತಿಯವರ ಅಂತ್ಯಕ್ರಿಯೆ ನಡೆದಿದ್ದು ಶನಿವಾರ ಪ್ರಗತಿಯವರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.