ಉಡುಪಿ, ಮೇ. 18(DaijiworldNews/AA): ಟೋಲ್ ಗೇಟ್ ನಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯತಿಯನ್ನು ರದ್ದು ಮಾಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಶನಿವಾರ ಸಂಜೆ ಉಡುಪಿ ಸಾಸ್ತಾನದ ಗುಂಡ್ಮಿ ಟೋಲ್ ಗೇಟ್ ಎದುರು ಪ್ರತಿಭಟನೆ ನಡೆಸಿತು.
ಈ ಸಂದರ್ಭ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಶ್ಯಾಮ ಸುಂದರ್ ಬಾಯರಿ ಅವರು ಮಾತನಾಡಿ, ಈ ಹಿಂದೆ ನವಯುಗ ಕಂಪನಿಯಲ್ಲಿ ಸ್ಥಳೀಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಾಹನ ಚಾಲಕರಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಇದೀಗ ಹೈವೇ ಕನ್ಸ್ಟ್ರಕ್ಷನ್ ಎಂಬ ಸಂಸ್ಥೆಯು ಗುಂಡ್ಮಿ ಟೋಲನ್ನು ಗುತ್ತಿಗೆ ಪಡೆದಿದ್ದು ಸ್ಥಳೀಯರಿಗೆ ಶುಲ್ಕ ವಿನಾಯತಿಗೆ ನಿರಾಕರಿಸಿರುವುದು ಆಕ್ಷೇಪಾರ್ಹ. ಶುಲ್ಕ ವಿನಾಯತಿ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಆದರೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಟೋಲ್ ಗೇಟಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಅವರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ನಿಯಂತ್ರಣಕ್ಕೆ ಯತ್ನಿಸಿದರು. ಬಳಿಕ ಪ್ರತಿಭಟನಾಕಾರರ ಜೊತೆ ಮಾತನಾಡಿದ ಅವರು, ಸೋಮವಾರ ಸಂಜೆ 5:00 ಗಂಟೆಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲು ಅವಕಾಶ ನೀಡುವ ಭರವಸೆ ನೀಡಿರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಸೋಮವಾರ ಸಂಜೆಯ ಮಾತುಕತೆ, ಫಲಪ್ರದವಾಗದೆ ಇದ್ದಲ್ಲಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಈ ಸಂದರ್ಭ ಸ್ಥಳೀಯ ನಾಯಕರದ ರಾಜಶೇಖರ್ ಹೆಬ್ಬಾರ್ ಅಲ್ವಿನ್ ಅಂದ್ರದೆ ವಿಠ್ಠಲ್ ಪೂಜಾರಿ ಹಾಗೂ ನೂರಾರು ಸ್ಥಳೀಯ ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.