ಮಂಗಳೂರು, ಮೇ. 18(DaijiworldNews/AA): ರಾಜ್ಯದಲ್ಲಿ ಸಂಸತ್ ಚುನಾವಣೆ ಬಹಳ ಉತ್ತಮವಾಗಿ ನಡೆದಿದ್ದು, ಕಾಂಗ್ರೆಸ್ ಪರ ವಾತಾವರಣ ನಿರ್ಮಾಣವಾಗಿರುವುದರ ಮಾಹಿತಿ ಕೂಡ ಇದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಹಿಂದಿನ ವ್ಯವಸ್ಥೆ ಬದಲಾವಣೆಯಾಗಿ, ವಾತಾವರಣವು ಕಾಂಗ್ರೆಸ್ ಪರವಾಗಿ ಗೆಲುವಿನ ಹಂತಕ್ಕೆ ತೆಗೆದುಕೊಂಡು ಹೋಗುವ ವಿಶ್ವಾಸವಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರ ಹಾಗೂ ಶಿಕ್ಷಣ ಕ್ಷೇತ್ರಗಳ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಸ್ವತಃ ಮುಖ್ಯಮಂತ್ರಿಗಳೇ ನಾಮಪತ್ರ ಸಲ್ಲಿಕೆ ವೇಳೆ ಹೋಗಿದ್ದಾರೆ. ಯಾವುದಾದರೂ ಮಸೂದೆ ಅಂಗೀಕಾರವಾಗಬೇಕಾದರೆ ಮೇಲ್ಮನೆಯ ಸಹಕಾರ ಬೇಕಾಗುತ್ತದೆ. ಹಾಗಾಗಿ ಮೇಲ್ಮನೆಯಲ್ಲಿ ನಾವು ಇನ್ನಷ್ಟು ಪ್ರಬಲವಾಗಿ ಶಕ್ತಿ ಪಡೆದುಕೊಳ್ಳಬೇಕಿದೆ ಎಂದರು.
ಎಲ್ಲಾ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ. ಚುನಾವಣೆಯನ್ನು ಬಹಳ ಅರ್ಥಪೂರ್ಣ, ವ್ಯವಸ್ಥಿತವಾಗಿ ಮಾಡಬೇಕೆನ್ನುವ ನಿಟ್ಟಿನಲ್ಲಿ ಪಕ್ಷದಿಂದ ನಿರ್ದೇಶನ ನೀಡಲಾಗಿದೆ. ಹೀಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಕೂಡ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಜನರ ವಿಶ್ವಾಸ ಹೆಚ್ಚಿದ್ದು, ಗೆಲುವು ಸಾಧಿಸುವ ಎಲ್ಲಾ ವಿಶ್ವಾಸವಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಮಂಜುನಾಥ್ ಭಂಡಾರಿ, ಹಿರಿಯ ನಾಯಕ ಆಯನೂರು ಮಂಜುನಾಥ್, ಮಮತಾ ಗಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.