ಮಂಗಳೂರು, ಮೇ 18 (DaijiworldNews/MS): ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ, ಮಂಗಳೂರು ಮೂಲದ ರಘುನಂದನ್ ಕಾಮತ್ (70) ಅವರು ಮೇ 17ರಂದು ಮುಂಬಯಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ರಘುನಂದನ್ ಅವರು 1954ರಲ್ಲಿ ಮೂಲ್ಕಿಯಲ್ಲಿ ಬಡ ಕುಟಂಬವೊಂದರಲ್ಲಿ ಜನಿಸಿದ್ದರು. ಕಾಮತ್ ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. ತಂದೆಯೊಂದಿಗೆ ವ್ಯಾಪಾರದಲ್ಲಿ ಕೈ ಜೋಡಿಸಿದ ಅವರು ಬಳಿಕ ಮಂಗಳೂರಿನಿಂದ ತನ್ನ 14ನೇ ವಯಸ್ಸಿನಲ್ಲೇ ಬಾಂಬೆಗೆ ತೆರಳಿದರು. ಅಣ್ಣನ ಹೋಟೆಲ್ನಲ್ಲಿ ಕೆಲ ಕಾಲ ಕೆಲಸ ಮಾಡಿ ಬಳಿಕ 1984 ರಲ್ಲಿ ಕಾಮತ್ ಅವರು ತಮ್ಮ ಮೊದಲ ನ್ಯಾಚುರಲ್ಸ್ ಐಸ್ ಕ್ರೀಮ್ ಮುಂಬೈನ ಜುಹುದಲ್ಲಿ ಸ್ಥಾಪಿಸಿದರು. ಅದು ದೇಶಾದ್ಯಂತ ಜನಪ್ರಿಯವಾಗಿ ದೊಡ್ಡ ಉದ್ಯಮವಾಗಿ ಬೆಳೆದಿದೆ
1984 ರಲ್ಲಿ ಕೇವಲ 4 ಮಂದಿ ಸಿಬ್ಬಂದಿ ಜತೆ ನ್ಯಾಚುರಲ್ ಐಸ್ ಕ್ರೀಂ ಸಂಸ್ಥೆಯನ್ನು ಆರಂಭಿಸಿದರು. ಪ್ರಸ್ತುತ ನ್ಯಾಚುರಲ್ ಸಂಸ್ಥೆ ದೇಶದಲ್ಲೇ ಪ್ರತಿಷ್ಠಿತ ಐಸ್ ಕ್ರೀಂ ಉದ್ಯಮವಾಗಿ ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಿದೆ. ದೇಶಾದ್ಯಂತ 156 ಔಟ್ ಲೆಟ್ ಹೊಂದಿದ್ದು, ವರ್ಷಕ್ಕೆ 400 ಕೋಟಿ ರೂ.ಗೂ ಅಧಿಕ ವ್ಯವಹಾರ ಮಾಡುತ್ತಿದೆ.
ಅಲ್ಪಕಾಲದ ಅಸೌಖ್ಯದಿಂದ ಮೃತರಾದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.