ಮಂಗಳೂರು, ಮೇ07(Daijiworld News/SS): ಇಡೀ ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರಿನಲ್ಲಿ ಜಾರಿಯಲ್ಲಿರುವ ನೀರು ರೇಷನಿಂಗ್ ನಿಯಮದಂತೆ ಇನ್ನೆರಡು ದಿನ (ಮೇ 7 ಹಾಗೂ 8) ಮಂಗಳೂರು ನಗರಕ್ಕೆ ನೀರು ಸರಬರಾಜು ಸ್ಥಗಿತವಾಗಲಿದೆ.
ಮಹಾ ನಗರ ಪಾಲಿಕೆಯ ನಿಯಮದ ಪ್ರಕಾರ, ಮೇ 3ರ ಬೆಳಗ್ಗೆ 6ರಿಂದ ಮೇ 7ರ ಬೆಳಗ್ಗೆ 6 ಗಂಟೆವರೆಗೆ ನೀರು ಸರಬರಾಜು ನಡೆಯಲಿದೆ. ಮೇ 7ರಂದು ಬೆಳಗ್ಗೆ 6 ಗಂಟೆಯಿಂದ ಮೇ 9ರ ಬೆಳಗ್ಗೆ 6 ಗಂಟೆ ವರೆಗೆ ಪೂರೈಕೆ ಇರುವುದಿಲ್ಲ.
ಮೇ 9ರ ಬೆಳಗ್ಗೆ 6 ಗಂಟೆಯಿಂದ ಮೇ 13ರ ಬೆಳಗ್ಗೆ 6 ಗಂಟೆವರೆಗೆ 96 ತಾಸು ಕಾಲ ಸರಬರಾಜು ಇರಲಿದೆ. ಮೇ 15ರ ಬೆಳಗ್ಗೆ 6ರವರೆಗೆ ಸ್ಥಗಿತಗೊಳ್ಳುತ್ತದೆ.
ಮೇ 15ರಂದು 6ರಿಂದ ಪ್ರಾರಂಭವಾಗುವ ಪೂರೈಕೆ ಮೇ 19ರ ಬೆಳಗ್ಗೆ 6 ಗಂಟೆಯವರೆಗೆ ಸರಬರಾಜು ಮಾಡಲಾಗುತ್ತದೆ. ಬಳಿಕ ಸ್ಥಗಿತಗೊಳ್ಳಲಿದ್ದು ಮೇ 21ರ ಬೆಳಗ್ಗೆ 6ಕ್ಕೆ ಪ್ರಾರಂಭಗೊಳ್ಳಲಿದೆ.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ದಿನಕ್ಕೆ 5ರಿಂದ 5 ಸೆಂ.ಮೀ ಕುಸಿಯುತ್ತಿದೆ. ಮೆ.6ರಂದು 4.38 ಮೀ. ಇದ್ದ ನೀರಿನ ಮಟ್ಟ ಸಂಜೆಯ ವೇಳೆಗೆ 4.34 ಮೀ.ಗೆ ಇಳಿದಿದೆ. ಪ್ರಸ್ತುತ ರೂಪಿಸಿರುವ ನೀರಿನ ರೇಷನಿಂಗ್ ಸ್ವರೂಪ ಮೇ 21ರ ವರೆಗೆ ಜಾರಿಯಲ್ಲಿರುತ್ತದೆ.
ಡ್ಯಾಂನಲ್ಲಿರುವ ನೀರಿನ ಪ್ರಮಾಣವನ್ನು ಅಂದಾಜಿಸಿಕೊಂಡು ಮಹಾನಗರ ಪಾಲಿಕೆ ಮುಂದಿನ ರೇಷನಿಂಗ್ ಸ್ವರೂಪವನ್ನು ನಿರ್ಧರಿಸಲಿದೆ.