ಉಡುಪಿ, ಮೇ07(Daijiworld News/SS): ಇಲ್ಲಿನ ತೋನ್ಸೆ ಗ್ರಾಮದ ಪಡುಕುದ್ರುವಿನಲ್ಲಿ ತೀರಾ ಬಡತನದಿಂದ ಇರಲು ಸೂರಿಲ್ಲದೆ ಸಂಕಷ್ಟದ್ಲಲಿದ್ದ ಹಿಂದೂ ಬಡಕುಟುಂಬಕ್ಕೆ ಚೊಕ್ಕದಾದ ಮನೆಯೊಂದನ್ನು ಕಟ್ಟಿ ಕೊಡುವ ಮೂಲಕ ಮುಸ್ಲಿಂ ಸಹೋದರರು ಮಾದರಿಯ ಕೆಲಸ ಮಾಡಿದ್ದಾರೆ.
ಹರಕು ಮುರುಕು ಗುಡಿಸಲಲ್ಲಿ ವಾಸವಿದ್ದ ಭಾಸ್ಕರ ಎಂಬವರ ಬಡ ಕುಟುಂಬವೊಂದಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ವತಿಯಿಂದ ಮನೆಯನ್ನು ನಿರ್ಮಿಸಿ ಕೊಡಲಾಗಿದೆ. ಪುಟ್ಟ ಮನೆಯೊಂದರಲ್ಲಿ ಬಹಳ ಕಷ್ಟದಿಂದ ವಾಸಿಸುತ್ತಿದ್ದ ಭಾಸ್ಕರ ಅವರ ಕುಟುಂಬವನ್ನು ನೋಡಿ ಬೇಸರಗೊಂಡು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಮನೆ ಕಟ್ಟಿ ಕೊಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಬಳಿಕ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಸದಸ್ಯರು ಒಟ್ಟು ಸೇರಿ ಹಣ ಸಂಗ್ರಹಿಸಿ ಚೊಕ್ಕದಾದ ಮನೆಯೊಂದನ್ನು ಕಟ್ಟಿ ಕೊಡುವ ಮೂಲಕ ಮುಸ್ಲಿಂ ಸಹೋದರರು ಮಾದರಿಯ ಕೆಲಸ ಮಾಡಿದ್ದಾರೆ.
ಇದೀಗ ಜಮಾಅತೆ ಇಸ್ಲಾಮಿ ಹಿಂದ್’ನ ರಾಜ್ಯ ಸಲಹಾ ಸಮಿತಿಯ ಸದಸ್ಯರಾದ ಜನಾಬ್ ಅಕ್ಬರ್ ಅಲಿ ನೂತನ ಮನೆಯ ಕೀಲಿ ಕೈ ಭಾಸ್ಕರ ಅವರಿಗೆ ನೀಡುವ ಮೂಲಕ ಮನೆಯನ್ನು ಅವರ ಸುಪುರ್ದಿಗೆ ನೀಡಿದ್ದಾರೆ.
ಸುಮಾರು 5,92,000 ರೂಪಾಯಿ ಮೌಲ್ಯದ ಮನೆಯ ವೆಚ್ಚದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ 4,42,000 ಭರಿಸಿದ್ದಾರೆ. ಜೊತೆಗೆ ಸರಕಾರದ ವಸತಿ ಯೋಜನೆಯಿಂದ 1,50,000 ರೂಪಾಯಿ ಸಹಾಯಧನವನ್ನು ಪಡೆದು ಈ ಮಾನವೀಯತೆಯ ಕೆಲಸ ಮಾಡಿದ್ದಾರೆ.