ಮಂಗಳೂರು, ಮೇ 16 (DaijiworldNews/MS): ಉಗ್ರ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿದ್ದ ಪ್ರಕರಣದಲ್ಲಿ ಕಳೆ ಮೂರು ವರ್ಷಗಳ ಹಿಂದೆ ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲ್ಪಟ್ಟಿದ್ದ ಮಾಜಿ ಶಾಸಕ ದಿವಂಗತ ಇದಿನಬ್ಬ ಅವರ ಮೊಮ್ಮಗನಾದ ಅಮರ್ ಅಬ್ದುಲ್ ರೆಹಮಾನ್ ಗೆ ದೆಹಲಿ ಹೈಕೋರ್ಟ್ ನಿಂದ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಯಾಗಿದ್ದು, 'ಐಸಿಸ್ ಬಾವುಟ, ಕರಪತ್ರ ಮೊಬೈಲ್ ನಲ್ಲಿದ್ದರೆ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ' ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಐಸಿಸ್ ನಂಟಿನ ಆರೋಪದಡಿ ಯುಎಪಿಎ ಕಾಯ್ದೆಯಡಿ ಅಮರ್ ಅಬ್ದುಲ್ ರೆಹಮಾನ್ ಐಸಿಸ್ ನಂಟಿನ ಆರೋಪದಡಿ ಅಗಸ್ಟ್ 21, 2021ರಂದು ಉಳ್ಳಾಲದ ಮನೆಯಿಂದ ಬಂಧಿಸಲಾಗಿತ್ತು. ತನ್ನ ಬಂಧನ ಪ್ರಶ್ನಿಸಿ ವಿಚಾರಣಾಧೀನ ಕೋರ್ಟ್ ನಲ್ಲಿ ಅಮ್ಮರ್ ಅಬ್ದುಲ್ ರೆಹಮಾನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ನಿರಾಕರಿಸಿದ ಹಿನ್ನೆಲೆ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ ಸುಧೀರ್ಘ ವಿಚಾರಣೆ ಬಳಿಕ ದೆಹಲಿ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಅಮ್ಮರ್ ಅಬ್ದುಲ್ ರೆಹಮಾನ್ ಜಾಮೀನು ಆದೇಶದಲ್ಲಿ ಹಲವು ಅಂಶಗಳನ್ನು ದೆಹಲಿ ಹೈಕೋರ್ಟ್ ಉಲ್ಲೇಖಿಸಿದ್ದು, 'ಉಗ್ರ ಸಂಘಟನೆ ಜೊತೆಗಿನ ಆಕರ್ಷಣೆಯನ್ನ ಉಗ್ರ ನಂಟು ಎನ್ನಲು ಆಗಲ್ಲ ಎಂದು ಹೇಳಿದೆ.
'ಐಸಿಸ್ ಪರ ವಿಡಿಯೋ ಡೌನ್ ಲೋಡ್, ಭಾಷಣ ಆಲಿಸೋದು ಯುಎಪಿಎ ಕಾಯ್ದೆಯಡಿ ತರಲು ಆಗುವುದಿಲ್ಲ. ಈ ಸಾಕ್ಷ್ಯ ಬಳಸಿ ಯುಎಪಿಎ ಸೆಕ್ಷನ್ 38 ಮತ್ತು 39 ರಡಿ ತರಲು ಬರುವುದಿಲ್ಲ, ಆರೋಪಿ ಮೊಬೈಲ್ ನಲ್ಲಿ ಲಾಡೆನ್, ಐಸಿಸ್ ಬಾವುಟಗಳು, ಐಸಿಸ್ ಪರ ಭಾಷಣಗಳ ತುಣುಕು ಸಿಕ್ಕಿದೆ ಎಂದ ಮಾತ್ರಕ್ಕೆ ಇದೆಲ್ಲದರ ಮೂಲಕ ಆತನಿಗೆ ಐಸಿಸ್ ನಂಟಿದೆ ಎನ್ನಲು ಆಗಲ್ಲ. ಇವುಗಳು ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್ ನಲ್ಲಿ ಸಿಗುತ್ತದೆ. ಕುತೂಹಲ ಇರೋ ಯಾರು ಬೇಕಾದರೂ ಮೊಬೈಲ್, ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಬಹುದು.ಹಾಗಾಗಿ ಇದನ್ನು ಇಟ್ಟುಕೊಂಡು ಐಸಿಸ್ ನಂಟನ್ನು ಸಾಬೀತು ಪಡಿಸಲು ಆಗಲ್ಲ ಎಂದು ಐಸಿಸ್ ನಂಟಿನ ಆರೋಪ ಕೇಸ್ ನಲ್ಲಿ ದೆಹಲಿ ಹೈಕೋರ್ಟ್ ಜಾಮೀನು ನೀಡುವ ವೇಳೇ ಅಭಿಪ್ರಾಯಪಟ್ಟಿದೆ.
ಈಗಾಗಲೇ ಪ್ರಕರಣ ಸಂಬಂಧ ಹಲವು ಜನರ ವಿರುದ್ದ ರಾಷ್ಟ್ರೀಯ ತನಿಖಾ ದಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಅಮ್ಮರ್ ಅಬ್ದುಲ್ ರೆಹಮಾನ್ ಜೊತೆಗೆ ದಿ.ಇದಿನಬ್ಬ ಸೊಸೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಕೂಡ ಬಂಧಿಸಿತ್ತು. ದೀಪ್ತಿ ಮಾರ್ಲ, ಮಾಜಿ ಶಾಸಕ ಇದಿನಬ್ಬ ಮಗ ಬಿ.ಎಂ.ಭಾಷಾರ ಮಗ ಅನಾಸ್ ಅಬ್ದುಲ್ ಪತ್ನಿಯಾಗಿದ್ದು, ದೀಪ್ತಿ ಮಾರ್ಲ ಅಮ್ಮರ್ ಅಬ್ದುಲ್ ರೆಹಮಾನ್ ಸೂಚನೆಗಳಂತೆ ಐಸಿಸ್ ಪರವಾಗಿ ಕೆಲಸ ಮಾಡುತ್ತಿದ್ದ ಆರೋಪವನ್ನು ಎನ್ಐಎ ಮಾಡಿತ್ತು.
ಇದೀಗ ಐಸಿಸ್ ನಂಟಿನ ಪೂರಕ ಸಾಕ್ಷ್ಯ ಸಿಗದ ಹಿನ್ನೆಲೆ ಅಮ್ಮರ್ ಅಬ್ದುಲ್ ರೆಹಮಾನ್ ಗೆ ಜಾಮೀನು ನೀಡಲಾಗಿತ್ತು . ದೀಪ್ತಿ ಮಾರ್ಲ ಇನ್ನು ಎನ್ ಐಎ ವಶದಲ್ಲಿದ್ದಾರೆಂದು ತಿಳಿದುಬಂದಿದೆ.