ಮಂಗಳೂರು,ಮೇ 07 (Daijiworld News/MSP): ಬಿಸಿಲಿನ ಝಳಕ್ಕೆ ಕಾದು ಕೆಂಡವಾಗಿದ್ದ ಕರಾವಳಿಯಲ್ಲಿ ಅಕ್ಷಯ ತೃತೀಯದಂದು ಸುರಿದ ಮಳೆ ವಾತಾವರಣವನ್ನು ತಂಪಾಗಿಸಿತು. ಮಂಗಳೂರು ನಗರ ಮತ್ತು ಸುತ್ತಮುತ್ತಲು ಮೇ 7 ರ ಮಂಗಳವಾರ ಸಂಜೆ 4 ರ ವೇಳೆಗೆ ಸಾದಾರಣ ಮಳೆ ಸುರಿಯಿತು.
ಬೆಳಗ್ಗೆಯಿಂದಲೇ ಜಿಲ್ಲೆ ಸೇರಿ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಸೆಕೆಯ ಪ್ರಮಾಣ ಹೆಚ್ಚಿತ್ತು. ಸಂಜೆ 4 ರ ವೇಳೆಗೆ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ವಾತಾವರಣ ತಂಪಾಯಿತು. ಕಳೆದ ಕೆಲವು ದಿನಗಳಿಂದ ನೀರಿನ ಸಮಸ್ಯೆ ಹಾಗೂ ಬಿಸಿಲಿನ ಬೇಗೆಯಲ್ಲಿದ್ದ ಮಂದಿಗೆ ಮಳೆ ಖುಷಿ ನೀಡಿತು. ಅಕಾಲಿಕ ಮಳೆಯಿಂದಾಗಿ ವಾಹನ ಸವಾರರು, ಅಂಗಡಿ, ರಸ್ತೆ ಬದಿಗಳಲ್ಲಿ ಕೆಲ ಕಾಲ ವಾಹನ ನಿಲ್ಲಿಸಿದ್ದ ಸನ್ನಿವೇಶ ನಗರದಲ್ಲಿ ಕಂಡು ಬಂತು. ಉದ್ಯೋಗಿಗಳು ರಸ್ತೆ ಬದಿಯಲ್ಲಿ ನಿಂತು ಮಳೆ ನಿಲ್ಲುವವರೆಗೆ ಕಾದರು.
ಮಂಗಳೂರಿನಲ್ಲಿ ಸಾದಾರಣ ಮಳೆಯಾಗಿದ್ದು, ಉಳಿದಂತೆ ಬಂಟ್ವಾಳ, ಬೆಳ್ತಂಗಡಿ ತಲಪಾಡಿ, ಮೂಡುಬಿದಿರೆ ಸುತ್ತಮುತ್ತ ಉತ್ತಮ ಮಳೆಯಾದ ವರದಿಯಾಗಿದೆ. ಇನ್ನು ಹವಾಮಾನ ಇಲಾಖೆಯೂ ಕರಾವಳಿ ಹಾಗೂ ದ.ಒಳನಾಡಿನಲ್ಲಿ 2-3 ದಿನ ಗಾಳಿ ಸಹಿತ ಮಳೆಯಾಗಲಿದ್ದು ಸಿಡಿಲಿನ ಅಬ್ಬರವೂ ಇರುವ ಸಾಧ್ಯತೆ ಇದೆ ತಿಳಿಸಿದೆ.