ಕುಂದಾಪುರ, ಮೇ. 14(DaijiworldNews/AK): ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಕುಂದಾಪುರದ ಸಿದ್ದಾಪುರದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಸಿದ್ಧಾಪುರ ಗ್ರಾಮದ ಸ್ವಾಮಿಹಾಡಿಯ ಸುರೇಶ್ ಶೆಟ್ಟಿ (35) ಮೃತ ದುರ್ದೈವಿ.
ಇಂದು ಸಂಜೆ ಸಿದ್ಧಾಪುರದಲ್ಲಿ ಸಿಡಿಲು ಸಹಿತ ಮಳೆಯಾಗಿದ್ದು, ಈ ಸಂದರ್ಭ ಸುರೇಶ್ ಶೆಟ್ಟಿ ಎಂಬವವರು ತನ್ನ ಕಿರಿಯ ಮಗನೊಂದಿಗೆ ಮನೆಯ ಸಮೀಪವೇ ಇದ್ದ ಮಾವಿನ ಮರದಿಂದ ಮಾವಿನಹಣ್ಣು ತರಲು ತೆರಳಿದ್ದರು. ಈ ವೇಳೆ ಅವರ ಎದೆಯ ಭಾಗಕ್ಕೆ ಏಕಾಏಕಿ ಸಿಡಿಲು ಬಡಿದಿದೆ. ಅಸ್ವಸ್ಥಗೊಂಡು ಬಿದ್ದಿದ್ದಾರೆ. ಇದೇ ವೇಳೆ ಸಿದ್ಧಾಪುರ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ಎದುರಾಗಿದ್ದರಿಂದ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾಗಿದ್ದರಿಂದ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ. ಈ ಸಂದರ್ಭ ಅವರೊಂದಿಗಿದ್ದ ಕಿರಿಯ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸುರೇಶ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಹೋಟೆಲ್ ಕಾರ್ಮಿಕರಾಗಿದ್ದು, ಮಗನ ಹುಟ್ಟುಹಬ್ಬಕ್ಕೆಂದು ಬೆಂಗಳೂರಿನಿಂದ ಊರಿಗೆ ಬಂದು ಸಿದ್ಧಾಪುರ ಸ್ವಾಮಿಹಾಡಿಯ ಹೆಂಡತಿ ಮನೆಯಲ್ಲಿ ಉಳಿದುಕೊಂಡಿದ್ದರು. ಸಿಡಿಲಾಘಾತದ ಸಂದರ್ಭ ಮನೆಯಿಂದ ಸಮೀಪವೇ ಅವರು ಮೃತಪಟ್ಟಿರುವುದು ಕುಟುಂಬಿಕರಿಗೂ ಆಘಾತವನ್ನುಂಟುಮಾಡಿದೆ. ಈ ವೇಳೆ ಸುರೇಶ್ ಶೆಟ್ಟಿ ಅವರ ಪತ್ನಿ, ಅತ್ತೆ, ನಾದಿನಿ ಹಾಗೂ ಓರ್ವ ಮಗ ಮನೆಯ ಒಳಗಿದ್ದುದರಿಂದ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು ಸಿದ್ಧಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಮೃತರು ಪತ್ನಿ ವಿನೋದಾ, 8 ವರ್ಷದ ಸುಮೋದ್ ಹಾಗೂ 4 ವರ್ಷದ ಸರ್ವದ ಎಂಬ ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲಾಘಾತಕ್ಕೆ ಸಿದ್ದಾಪುರ ಪರಿಸರದಲ್ಲಿ ಮೊಬೈಲ್ ನೆಟ್ ವರ್ಕ್ ಹಾಗೂ ವಿದ್ಯುತ್ ಸಮಸ್ಯೆ ಎದುರಾಗಿದ್ದು, ರಾತ್ರಿಯ ತನಕವೂ ದುರಸ್ತಿಯಾಗಿರಲಿಲ್ಲ.