ಬೆಳ್ತಂಗಡಿ, ಮೇ.14(DaijiworldNews/AA): ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಗುಡ್ಡ ಏರಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಘಟನೆ ಮಂಗಳೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ವ್ಯಾಪ್ತಿಯ ಚಿಬಿದ್ರೆಯ ಕಾಪು ಚಡಾವು ಎಂಬಲ್ಲಿ ಭಾನುವಾರ ನಡೆದಿದೆ. ಈ ಅವಘಡದಲ್ಲಿ 17 ಮಂದಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಬೆಂಗಳೂರು ಮೂಲದ ವೆಂಕಟಸ್ವಾಮಪ್ಪ (45) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಗಾಯಾಳುಗಳಾದ ಕೀರ್ತನಾ (15), ತನಿಷ್ಕಾ (7), ಯಶವಂತ (21), ರೂಪಾ(37), ಹಂಸಾ (39), ತನುಶ್ರೀ(21), ವಿಕಾಸ್ (13), ಅಖೀಲಾ (23), ರತ್ನಮ್ಮ (47), ಬಾಲಕೃಷ್ಣ (33), ಎಲ್ಲಮ್ಮ (62), ರೂಪಾ (33), ಪ್ರೀತಮ್ (11) ಯಲ್ಲಮ್ಮ, ಪಾವನಾ, ಮಂಜುಳಾ, ಬಿಂದುಶ್ರೀ ಮಿಥುನ್ ರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಂಗಳೂರಿನಿಂದ ಚಾರ್ಮಾಡಿ ಘಾಟ್ ಮಾರ್ಗದ ಮೂಲಕ ಮಂಗಳೂರಿಗೆ ಆಗಮಿಸುತ್ತಿದ್ದ ಮಿನಿ ಬಸ್ ಅಪಘಾತವಾಗಿದೆ. ಈ ಮಿನಿ ಬಸ್ ರಸ್ತೆ ಬಿಟ್ಟು ನದಿ ಬದಿ ಇರುವ ಗುಡ್ಡವನ್ನು ಹತ್ತಿದ್ದು, ಖಾಸಗಿ ವಿದ್ಯುತ್ ಲೈನ್ ಕಂಬಕ್ಕೆ ಬಡಿದಿದೆ. ಹೀಗಾಗಿ ಸಂಭವನೀಯ ಭಾರೀ ಅನಾಹುತ ತಪ್ಪಿದಂತಾಗಿದೆ.