ಬಂಟ್ವಾಳ, ಮೇ 13 (DaijiworldNews/MS): ಸುರಿದ ಪ್ರಥಮ ಮಳೆಗೆ ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಡುಕುಂಟಾಗಿದೆ.
ಹೆದ್ದಾರಿ ಕಾಮಗಾರಿ ಹಾಗೂ ಪ್ಲೈ ಓವರ್ ಕಾಮಗಾರಿ ನಡೆಯುತ್ತಿರುವ ಕಲ್ಲಡ್ಕದಲ್ಲಿ ಭಾನುವಾರ ಸುರಿದ ಬಾರಿ ಗಾಳಿ ಮಳೆಗೆ ನೀರು ಹರಿದು ಹೋಗುವ ಚರಂಡಿ ವ್ಯವಸ್ಥೆ ಸರಿಯಾಗದೆ ಇದ್ದ ಪರಿಣಾಮ ರಸ್ತೆ ತುಂಬಾ ಕೆಸರು ತುಂಬಿಕೊಂಡಿದ್ದು, ಅಲ್ಲಲ್ಲಿ ಉಂಟಾದ ಗುಂಡಿಯಿಂದ ವಾಹನಗಳು ಸರಾಗವಾಗಿ ಚಲಿಸಲು ಸಾಧ್ಯವಾಗುತ್ತಿಲ್ಲ. ಮೇ.13 ರಂದು ಬೆಳಿಗ್ಗೆಯಿಂದಲೇ ಕುದ್ರೆಬೆಟ್ಟುವಿನಿಂದ ನರಹರಿ ವರೆಗೂ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಕಿರಿದಾದ ಸರ್ವೀಸ್ ರಸ್ತೆಯಲ್ಲಿ ಕೆಸರುನೀರು ತುಂಬಿಕೊಂಡಿದ್ದ ಕಾರಣ ವಾಹನಗಳು ಸಂಚಾರಕ್ಕೆ ಪರದಾಟ ನಡೆಸುವ ದೃಶ್ಯ ಕಂಡುಬಂತು. ಒಂದೇ ಮಳೆಗೆ ರಸ್ತೆ ಈ ರೀತಿಯಲ್ಲಿ ಮಾರ್ಪಾಡುಗೊಂಡರೆ ಇನ್ನು ಮಳೆಗಾಲದಲ್ಲಿ ಸಂಚಾರ ಮಾಡುವುದು ಸಾಧ್ಯನಾ? ಎಂಬ ಪ್ರಶ್ನೆ ಸಾರ್ವಜನಿಕರದ್ದು. ರಸ್ತೆಯಿಲ್ಲದ ಕಲ್ಲಡ್ಕದಲ್ಲಿ ಕೆಸರು ಮಯವಾಗಿರುವ ಗದ್ದೆಯಲ್ಲಿ ವಾಹನ ಸಂಚಾರ ಮಾಡುವುದು ಅಪಾಯವೇ ಸರಿ.
ಕಾಮಗಾರಿ ನಡೆಯುತ್ತಿರುವ ಈ ಭಾಗದಲ್ಲಿ ವಾಹನ ಸವಾರರಿಗೆ ಅಪಾಯವಂತೂ ತಪ್ಪಿದ್ದಲ್ಲ. ಘನಗಾತ್ರದ ಮೆಷಿನರಿನ ಮೂಲಕ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಚೂರು ಹೆಚ್ಚುಕಮ್ಮಿಯಾಗಿ ಸಾಮಾಗ್ರಿಗಳು ಬಿದ್ದರೂ ಮನುಷ್ಯನ ಜೀವಕ್ಕೆ ಅಪಾಯವಿದೆ. ಹಾಗಾಗಿ ವಾಹನ ಸವಾರರು ಎಚ್ಚರಿಕೆಯಿಂದ ಚಲಾಯಿಸುವಂತೆ ಮಾಧ್ಯಮದ ಸಲಹೆಯಾಗಿದೆ.