ಮಂಗಳೂರು, ಮೇ 7(Daijiworld News/MSP): ಮಂಗಳೂರಿನ ರಸ್ತೆಗಳಲ್ಲಿ ತಾಜ್ಯ ನೀರು ಚೆಲ್ಲುತ್ತಾ ಸಾಗುವ ಮೀನು ಸಾಗಾಟ ಲಾರಿಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಮೀನಿನ ಲಾರಿಗಳ ವಿರುದ್ದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತುಕೊಂಡ ಪೊಲೀಸ್ ಇಲಾಖೆ ರಸ್ತೆಯಲ್ಲಿ ಮೀನಿನ ತ್ಯಾಜ್ಯವನ್ನು ರಸ್ತೆಯಲ್ಲಿ ಸಾಗುವ ಲಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಏಪ್ರಿಲ್ 29ರಂದು ಮೀನು ಸಾಗಾಟ ಲಾರಿ ಮಾಲಕರು, ಸಾರಿಗೆ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಜತೆ ಪೊಲೀಸ್ ಕಮಿಷನರ್ ಅವರು ಸಭೆ ನಡೆಸಿ, ಇದೇ ಸಮಸ್ಯೆಗೆ ಹಸಿರು ನ್ಯಾಯಾಧೀಕರಣ ಪೀಠ ಕೇರಳ ರಾಜ್ಯಕ್ಕೆ ಸೂಚಿಸಿದ್ದ ಕ್ರಮಗಳನ್ನು ಇಲ್ಲೂ ಜಾರಿಗೊಳಿಸಿ ತಕ್ಷಣ ಕಾರ್ಯಗತಗೊಳಿಸಲು ಸೂಚನೆ ನೀಡಲಾಗಿದೆ.
ಹೀಗಾಗಿ ಸೋರಿಕೆಯಾಗದಂತೆ ಲೀಕ್ ಪ್ರೋಫ್ ವಾಹನದಲ್ಲಿ ಸಾಗಾಟ ಮಾಡಬೇಕು. ಒಂದು ಟನ್ ಮೀನು ಸಾಗಾಟ ಮಾಡುವುದಿದ್ದರೆ, 50 ಲೀಟರ್ ಐಸ್ ನೀರು ಸಂಗ್ರಹಕ್ಕೆ ಪ್ರತ್ಯೇಕ ಕ್ಯಾನ್ ಅಳವಡಿಸಬೇಕು. ಕಂಪಾರ್ಟ್ಮೆಂಟ್ ವ್ಯವಸ್ಥೆಯನ್ನು ಮೀನು ಸಾಗಾಟ ವಾಹನಗಳು ಹೊಂದಿರಬೇಕು. ಕೆಲವು ಲಾರಿಗಳು ಶುಚಿತ್ವವನ್ನು ಹೊಂದಿರುವುದಿಲ್ಲ. ಇದು ಕೂಡ ವಾತಾವರಣ ಕಲುಷಿತ ಗೊಳ್ಳಲು ಕಾರಣವಾಗುತ್ತದೆ. ಇವೆಲ್ಲವನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಅಲ್ಲದೆ ನಿಯಮವನ್ನು ಪಾಲಿಸದೆ ಸಾಗಾಟ ಮಾಡಿರುವುದು ಕಂಡುಬಂದರೆ ಪ್ರಥಮ ಬಾರಿಗೆ 5,000 ರೂಪಾಯಿ ದಂಡಶುಲ್ಕ, ಅನಂತರವೂ ನಿಯಮ ಉಲ್ಲಂಘನೆ ಕಂಡುಬಂದರೆ ಲಾರಿಯ ಪರವಾನಿಗೆ ಅಮಾನತು ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಈಗಾಗಲೇ ಲಾರಿ ಮಾಲಕರಿಗೆ ಸೂಚನೆ ನೀಡಲಾಗಿದೆ.