ಕಾಸರಗೋಡು, ಮೇ.11(DaijiworldNews/AA): ಹಾಡಹಗಲೇ ಎರಡೂವರೆ ಪವನ್ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮೂಲತಃ ಉಳ್ಳಾಲದ ಪ್ರಸ್ತುತ ಬದಿಯಡ್ಕ ನೆಲ್ಲಿಕಟ್ಟೆ ಚೆನ್ನಡ್ಕ ಮುಹಮ್ಮದ್ ಸುಹೈಲ್ (32) ಎಂದು ಗುರುತಿಸಲಾಗಿದೆ.
ಏಪ್ರಿಲ್ ೨೭ ರಂದು ಬೆಳಿಗ್ಗೆ ತೋಟಕ್ಕೆ ತೆರಳುತ್ತಿದ್ದ ಗೋಪಾಲಕೃಷ್ಣ ಭಟ್ ರವರ ಕುತ್ತಿಗೆಯಿಂದ ಹಾಡಹಗಲೇ ಎರಡೂವರೆ ಪವನ್ ಚಿನ್ನದ ಸರವನ್ನು ಬೈಕ್ ನಲ್ಲಿ ಬಂದಿದ್ದ ಸುಹೈಲ್ ಹಾಗೂ ಇನ್ನೋರ್ವ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಿಸಿ ಟಿವಿ ದೃಶ್ಯವನ್ನು ಕಲೆ ಹಾಕಿದ್ದ ಪೊಲೀಸರು ಆರೋಪಿಗಳಿಗಾಗಿ ತನಿಖೆ ನಡೆಸಿದ್ದರು. ಈ ಮಧ್ಯೆ ವಯನಾಡಿನ ಕೋಳಿ ಮಾಂಸ ಮಾರಾಟ ಮಳಿಗೆಯಲ್ಲಿ ಈತ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಸುಹೈಲ್ ವಿರುದ್ಧ ಬದಿಯಡ್ಕ, ಕುಂಬಳೆ, ವಿದ್ಯಾನಗರ, ಕಾಸರಗೋಡು ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ, ಲೂಟಿ ಸೇರಿದಂತೆ 20 ಕ್ಕೂ ಅಧಿಕ ಪ್ರಕರಣಗಳ ಪ್ರಕರಣಗಲ್ಲಿ ಶಾಮೀಲಾಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಅನ್ಸಾರ್, ಹಾಗೂ ದಿನೇಶ್, ಆರಿಫ್, ಶ್ರೀನೇಶ್ ಭಾಗವಹಿಸಿದ್ದರು.