ಕುಂದಾಪುರ, ಮೇ 7(Daijiworld News/MSP): ತೆಕ್ಕಟ್ಟೆಯ ಹೃದಯ ಭಾಗದಲ್ಲಿನ ಹರಿಶ್ರೀ ಮೆಡಿಕಲ್, ಶ್ರೀದುರ್ಗಾ ಮೆಡಿಕಲ್, ಶ್ರೀ ಮಹಾದೇವಿ ಮೆಡಿಕಲ್ ಸೇರಿದಂತೆ ಮೂರು ಮೆಡಿಕಲ್ಗಳಿಗೆ ಶೆಟ್ಟರ್ನ್ನು ಎತ್ತಿ ಕಳ್ಳತನದ ಯತ್ನ ಮಾಡಲಾದ ಘಟನೆ ಮೇ 6 ರ ಸೋಮವಾರ ವರದಿಯಾಗಿದೆ.
ಸೋಮವಾರ ಬೆಳಗ್ಗಿನ ಜಾವ 3 ಗಂಟೆಯ ನಂತರ ಈ ಕೃತ್ಯ ಮಾಡಿದ್ದರೆಂದು ಶಂಕಿಸಲಾಗಿದ್ದು, ತೆಕ್ಕಟ್ಟೆಯ ಹರಿಶ್ರೀ ಮೆಡಿಕಲ್ನಲ್ಲಿ ರೂ.5000 ನಗದು ಮತ್ತು ಉಳಿದ ಎರಡೂ ಮೆಡಿಕಲ್ನಲ್ಲಿ ಕದ್ದೊಯ್ಯುವುದಕ್ಕೆ ಏನೂ ಸಿಕ್ಕಿರಲಿಲ್ಲ ಕಾರಣ ಕಳ್ಳತನಕ್ಕೆ ವಿಫಲ ಯತ್ನವಾಗಿದೆ. ಸೋಮವಾರ ಬೆಳಿಗ್ಗೆ 6.30 ರ ಸುಮಾರಿಗೆ ಕೋಟ ಪೋಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಲಾಗಿದ್ದು ಪೋಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ರೀತಿಯ ಮೆಡಿಕಲ್ ಮೇಲಿನ ಕಳ್ಳತನದ ಯತ್ನ ಇದು ಎರಡನೇ ಬಾರಿಯಾಗಿರುತ್ತದೆ. ಈ ಹಿಂದೆ ಹರಿಶ್ರೀ ಮೆಡಿಕಲ್ ನಲ್ಲಿ ಕಳ್ಳತನದ ಯತ್ನ ನಡೆದಿತ್ತು. ಈ ರೀತಿಯ ಕೃತ್ಯ ಸ್ಥಳೀಯ ಗೊತ್ತಿರುವವರ ಕೈವಾಡ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.