ಕೊಲ್ಲೂರು, ಮೇ 9 (DaijiworldNews/ AK): ಕೊಲ್ಲೂರಿನ ನದಿಗಳ ಮಾಲಿನ್ಯ, ಪರಿಸರ ನಾಶ ಹಾಗೂ ಸರಕಾರಿ ಭೂಮಿಗಳ ಅತಿಕ್ರಮಣದ ಬಗ್ಗೆ ಸಲ್ಲಿಸಿರುವ ಅರ್ಜಿಯನ್ನು ಚೆನ್ನೈಯ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠ ವಿಚಾರಣೆಗೆ ಅಂಗೀಕರಿಸಿದೆ ಎಂದು ಹರೀಶ್ ತೋಳಾರ್ ಕೊಲ್ಲೂರು ತಿಳಿಸಿದ್ದಾರೆ.
ಕೊಡಚಾದ್ರಿ ಬೆಟ್ಟಗಳಿಂದ ಹರಿದು ಬರುವ ಪುಣ್ಯ ತೀರ್ಥಗಳು ಸಂಗಮವಾಗಿ ಅಗ್ನಿ ತೀರ್ಥ, ಕಾಶಿ ತೀರ್ಥ ಹಾಗೂ ಸೌಪರ್ಣಿಕೆಯಾಗಿ ಕೊಲ್ಲೂರಿನಲ್ಲಿ ಹರಿಯುತ್ತಿದೆ. ಈ ನದಿಯ ಬಗ್ಗೆ ಭಕ್ತರಿಗೆ ಬಹಳಷ್ಟು ನಂಬಿಕೆ ಇದೆ. ಇತ್ತೀಚಿನ ಕೆಲ ವರ್ಷ ಗಳಿಂದ ಕೊಲ್ಲೂರಿನಲ್ಲಿ ತಲೆ ಎತ್ತಿರುವ ಹಾಗೂ ನಿರ್ಮಾಣವಾಗುತ್ತಿರುವ ವಸತಿ ಗೃಹಗಳು, ಬಹು ಮಹಡಿಯ ಕಟ್ಟಡ ಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ಅನುಪಯುಕ್ತ ದ್ರವ ಹಾಗೂ ಘನ ತ್ಯಾಜ್ಯಗಳು ನೇರವಾಗಿ ನದಿಯನ್ನು ಸೇರುವುದರಿಂದ ನದಿಯ ಪಾವಿತ್ರ್ಯತೆ ಹಾಳಾಗುವ ಜೊತೆಯಲ್ಲಿ ನೀರಿನಾಶ್ರಯ ಹೊಂದಿರುವ ಜಲಚರ ಹಾಗೂ ಪರಿಸರದ ಪ್ರಾಣಿ ಸಂಕುಲದ ಜೀವಕ್ಕೂ ಕುತ್ತು ತರುತ್ತಿದೆ.
ಈವರೆಗೂ ಈ ಸಮಸ್ಯೆಗಳು ಪರಿಹಾರ ಕಾಣದೆ ವರ್ಷದಿಂದ ವರ್ಷಕ್ಕೆ ಉದ್ಭವಿಸುತ್ತಲೇ ಇದೆ. ನದಿಯ ಪಾವಿತ್ರ್ಯತೆ ಹಾಗೂ ಪರಿಸರದ ಉಳಿವಿಗಾಗಿ ಸಾಕಷ್ಟು ಸಾರ್ವಜನಿಕ ಹೋರಾಟ ನಡೆಸಿದರೂ, ಅದು ಕೇವಲ ಅರಣ್ಯ ರೋಧನವಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಶ್ರೀಮೂಕಾಂಬಿಕಾ ದೇವಿಯ ಭಕ್ತರು, ಮಾಧ್ಯಮ ಸ್ನೇಹಿತರು ಹಾಗೂ ಪರಿಸರಾಸಕ್ತರ ಸಲಹೆ ಪಡೆದುಕೊಂಡು ಮಾಹಿತಿ ಹಕ್ಕಿನಲ್ಲಿ ಅನೇಕ ದಾಖಲೆಗಳನ್ನು ಪಡೆದುಕೊಂಡು, ನ್ಯಾಯಕ್ಕಾಗಿ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಲಾಗಿತ್ತು.ಇದೀಗ ಅರ್ಜಿಯನ್ನು ಚೆನ್ನಯ ಪರ್ವೋಚ್ಚ ನ್ಯಾಯಾಲಯದ ಹಸಿರು ಪೀಠ ವಿಚಾರಣೆಗೆ ಅಂಗೀಕರಿಸಿದೆ ಎಂದು ಹರೀಶ್ ತೋಳಾರ್ ಕೊಲ್ಲೂರು ತಿಳಿಸಿದ್ದಾರೆ.