ಬೆಳ್ತಂಗಡಿ, ಮೇ 9 (DaijiworldNews/MS): ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದ, ನೇರ ನಡೆನುಡಿಯ, ದಿಟ್ಟ ಹೋರಾಟಗಾರ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ಪಾರ್ಥಿವ ಶರೀರ ಬೆಂಗಳೂರಿನಿಂದ ಇಂದು ಬೆಳಗ್ಗೆ 3.30 ಕ್ಕೆ ಬೆಳ್ತಂಗಡಿಯ ಹಳೆಕೋಟೆ ನಿವಾಸಕ್ಕೆ ಆಗಮಿಸಿತು. ಬಳಿಕ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳು ಇಂದು ಬೆಳಿಗ್ಗೆ ಹಳೆಕೋಟೆಯ ಅವರ ಮನೆಯಲ್ಲಿ ಜರುಗಿತು.
ಅನಾರೋಗ್ಯದ ಸಮಸ್ಯೆಯಿಂದ ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಪಾರ್ಥೀವ ಶರೀರ ಸ್ವಗೃಹಕ್ಕೆ ಆಗಮಿಸುತ್ತಿದ್ದಂತೆ ಬೆಳ್ತಂಗಡಿ ಶೋಕಸಾಗರದಲ್ಲಿ ಮುಳುಗಿತ್ತು. ಬಳಿಕ ಕುಟುಂಬ ವರ್ಗಕ್ಕೆ ಮನೆಯಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಾರ್ಥಿವ ಶರೀರದ ಅಂತಿಮ ವಿಧಿ ನೆರವೇರಿಸಿ ಬಳಿಕ ಕೊಂಚ ಸಮಯ ಅವರ ಆಪ್ತ ಅಭಿಮಾನಿ ವರ್ಗಕ್ಕೆ ಅಂತಿಮನಮನ ಸಲ್ಲಿಸಲು ಅವಕಾಶ ನೀಡಲಾಯಿತು.
ಬಳಿಕ ಬೆಳ್ತಂಗಡಿಯ ನಗರದ ಮೂಲಕ ಪಾರ್ಥಿವ ಶರೀರದ ಮೆರವಣಿಗೆ ತಾಲೂಕು ಕ್ರೀಡಾಂಗಣದ ತನಕ ಕೊಂಡ್ಯೊಯಲಾಯಿತು. ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಮಧ್ಯಾಹ್ನ ತನಕ ಅವಕಾಶ ನೀಡಲಾಗಿದ್ದು, ಬೆಳ್ತಂಗಡಿ ನಗರದಲ್ಲಿ ವರ್ತಕರು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಮಾಜಿ ಶಾಸಕರಿಗೆ ಗೌರವ ಸಲ್ಲಿಸಿದರು. ಸಂಜೆ ವೇಳೆ ಅವರ ಹುಟ್ಟೂರು ಕುವೆಟ್ಟು ಗ್ರಾಮದ ಕೇದೆಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
ಸಂಜೆ ವೇಳೆಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕುವೆಟ್ಟು ಗ್ರಾಮದ ಕೇದೆ ಹೊಸಮನೆಯಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದ್ದು, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುನಾರ್, ಸಚಿವರು, ಶಾಸಕರು, ಅವರ ಆಪ್ತ ವಲಯ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.