ಮಂಗಳೂರು: ನಗರದ ಸೆಂಟ್ರಲ್, ಜಂಕ್ಷನ್ ನಲ್ಲಿ ಕಾದಿರಿಸದ ಟಿಕೆಟ್ ನೀಡಲು ಎಟಿವಿಎಂ
Wed, May 08 2024 01:44:19 PM
ಮಂಗಳೂರು, ಮೇ.8(DaijiworldNews/AA): ನಗರದ ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾದಿರಿಸದ ಟಿಕೆಟ್ಗಳನ್ನು ವಿತರಿಸಲು ಸ್ವಯಂಚಾಲಿತ ಟಿಕೆಟ್ ವಿತರಣೆ ಯಂತ್ರ(ಎಟಿವಿಎಂ) ಅಳವಡಿಸಲಾಗಿದೆ.
ಎಟಿವಿಎಂನಲ್ಲಿ ಈ ಹಿಂದೆ ಸಹಾಯಕರನ್ನು ನಿಯೋಜಿಸಿ ಟಿಕೆಟ್ಗಳನ್ನು ನೀಡಲಾಗುತ್ತಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ಈ ಸೇವೆ ಸ್ಥಗಿತಗೊಂಡಿತ್ತು. ಪ್ರಯಾಣಿಕರಿಗೆ ನೇರವಾಗಿ ಇದರ ಬಳಕೆ ಕಷ್ಟವಾಗಿರುವುದರಿಂದ ಬಹುತೇಕ ಮಂದಿ ಕೌಂಟರ್ಗಳಿಂದಲೇ ಟಿಕೆಟ್ ಪಡೆಯುತ್ತಿದ್ದರು.
ಇದೀಗ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಈ ಯಂತ್ರದ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗಬೇಕು ಎಂಬ ಉದ್ದೇಶದಿಂದ ಸಹಾಯಕರನ್ನು ನಿಯೋಜಿಸಿ ಟಿಕೆಟ್ ವಿತರಿಸುವ ಯೋಜನೆ ರೂಪಿಸಿದೆ. ಅದರಂತೆ ಮೊದಲ ಹಂತದಲ್ಲಿ ಎಟಿವಿಎಂ ಇರುವ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಮತ್ತು ಕಾಸರಗೋಡು ಸಹಿತ ವಿಭಾಗ ವ್ಯಾಪ್ತಿಗೆ 300 ಸಹಾಯಕರನ್ನು ನಿಯೋಜಿಸಲು ನಿರ್ಧರಿಸಿದೆ.
ಸದ್ಯ ಇಲಾಖಾ ಸಿಬ್ಬಂದಿಯೇ ಪ್ರಯಾಣಿಕರಿಗೆ ಟಿಕೆಟ್ ಪಡೆಯಲು ಸಹಾಯ ಮಾಡುತ್ತಿದ್ದಾರೆ. ಇದರಿಂದ ಅವರ ಕೆಲಸದೊತ್ತಡ ಹೆಚ್ಚಾಗಿದ್ದು, ಶೀಘ್ರದಲ್ಲೇ ಸಹಾಯಕರ ನಿಯೋಜನೆಯಾಗಲಿದೆ ಎಂದು ತಿಳಿದುಬಂದಿದೆ. ಪ್ರತಿನಿತ್ಯ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ 8 ಲಕ್ಷ ರೂ. ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ 2 ಲಕ್ಷ ರೂ. ಮೌಲ್ಯದ ಕಾದಿರಿಸದ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದನ್ನು ಸಂಪೂರ್ಣವಾಗಿ ಎಟಿವಿಎಂ ಮೂಲಕವೇ ನೀಡಬೇಕು ಎಂದು ಇಲಾಖೆಯು ನಿರ್ಧರಿಸಿದೆ.