ಕಾರ್ಕಳ, ಮೇ.8(DaijiworldNews/AA): ಸುಡುಮದ್ದು ತಯಾರಿಕಾ ಘಟಕ ಸಿಡಿದು ಇಬ್ಬರು ಮಹಿಳೆಯರಿಗೆ ಗಾಯಗಳಾದ ಘಟನೆ ಕಾರ್ಕಳ ತಾಲೂಕಿನ ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ಬುಧವಾರ ಸಂಭವಿಸಿದೆ.
ಘಟನೆಯಲ್ಲಿ ಸುಶ್ಮಾ(26) ಗಂಭೀರ ಗಾಯ ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ಕೆಲವಾರು ವರ್ಷಗಳಿಂದ ಸುಡುಮದ್ದು ತಯಾರಿಕಾ ಘಟಕ ಕಾರ್ಯಾಚರಿಸುತ್ತಿದ್ದು ಎಂದಿನಂತೆ ಇಂದು ಬೆಳಗ್ಗೆ ಸುಡುಮದ್ದು ತಯಾರಿಕೆ ಸಂದರ್ಭ ಅನಿರೀಕ್ಷಿತವಾಗಿ ಸ್ಫೋಟಗೊಂಡಿದೆ. ಸುಡುಮದ್ದು ತಯಾರಿಕಾ ಘಟಕದಲ್ಲಿ 3 ಬೇರೆ ಬೇರೆ ಕಟ್ಟಡಗಳಿದ್ದು ಒಂದು ಕಟ್ಟಡ ಸ್ಫೋಟಕ್ಕೆ ತುತ್ತಾಗಿದೆ.
ಸ್ಫೋಟದ ಸಂದರ್ಭ ಮಹಿಳೆಯರು ಒಳಗೆ ಕೆಲಸ ನಿರ್ವಹಿಸುತ್ತಿದ್ದರು. ಕಟ್ಟಡದ ಮೇಲ್ಟಾವಣಿ ಹೊತ್ತಿ ಉರಿದಿದ್ದು ಕಟ್ಟಡ ಸಂಪೂರ್ಣ ಹಾನಿ ಆಗಿದೆ. ಗರ್ನಲ್ ತಯಾರಿಕಾ ಘಟಕವು ಪರವಾನಿಗೆ ಹೊಂದಿದೆ ಎಂಬ ಮಾಹಿತಿ ತಿಳಿದುಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣಾಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು, ಡಿವೈಎಸ್ ಪಿ ಮೊದಲಾದವರು ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ.