ಮಂಗಳೂರು: ರಿಕ್ಷಾ ಚಾಲಕರು, ರೈಲು ಪ್ರಯಾಣಿಕರ ಮಧ್ಯೆ ಮಾರಮಾರಿ
Wed, May 08 2024 12:16:25 PM
ಮಂಗಳೂರು, ಮೇ.8(DaijiworldNews/AA): ರಿಕ್ಷಾ ಚಾಲಕರು ಮತ್ತು ರೈಲು ಪ್ರಯಾಣಿಕರ ಮಧ್ಯೆ ತಳ್ಳಾಟ, ನೂಕಾಟ ನಡೆದಿರುವ ಘಟನೆ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ನಲ್ಲಿ ಇಂದು ಮುಂಜಾನೆ ನಡೆದಿದೆ.
ಹೆಣ್ಣು ಮಕ್ಕಳೆಂಬ ಕರುಣೆ ಇಲ್ಲದೆ ಅಸಭ್ಯವಾಗಿ ವರ್ತಿಸಿ ರಿಕ್ಷಾ ಚಾಲಕರು ಹೊಡೆದಾಡುತ್ತಿರುವುದು ದೃಶ್ಯ ರೈಲ್ವೆ ನಿಲ್ದಾಣದಲ್ಲಿ ಕಂಡುಬಂದಿದೆ. ಸದ್ಯ ರಿಕ್ಷಾ ಚಾಲಕರ ಹಾಗೂ ಪ್ರಯಾಣಿಕರ ಹೊಡೆದಾಟ ಮತ್ತು ತೀವ್ರ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಂದು ಬೆಳಗ್ಗೆ ಚೆನ್ನೈನಿಂದ ದಂಪತಿ ಬಂದಿದ್ದು, ಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಲು ಸ್ಥಳೀಯರಾದ ಇಬ್ಬರು ಬಂದಿದ್ದರು. ರೈಲ್ವೇ ನಿಲ್ದಾಣದಲ್ಲಿ ಪ್ರಸ್ತುತ ವ್ಯವಸ್ಥೆಯ ಪ್ರಕಾರ, ನಿಗದಿತ ಸ್ಥಳಗಳಲ್ಲಿ ಮಾತ್ರ ಪಾರ್ಕಿಂಗ್ ಮಾಡಬೇಕು. ಹಾಗೂ ಎಲ್ಲಾ ಪ್ರಯಾಣಿಕರ ಅನುಕೂಲಕ್ಕಾಗಿ ವಿಸ್ತೃತ ಸಮಯವನ್ನು ಕಾಯದೆ ಮುಖ್ಯ ಗೇಟ್ನ ಮುಂದೆ ಪಿಕಪ್ ಮತ್ತು ಡ್ರಾಪ್ ಮಾಡಲು ಮಾತ್ರ ಅವಕಾಶವಿದೆ.
ಈ ಬಗ್ಗೆ ಪಾರ್ಕಿಂಗ್ ನೋಡಿಕೊಳ್ಳುವ ಚಂದನ್ ಎಂಬ ವ್ಯಕ್ತಿ ಮತ್ತು ದಂಪತಿಯನ್ನು ಕರೆದುಕೊಂಡು ಹೋಗಲು ಬಂದ ಇಬ್ಬರು ವ್ಯಕ್ತಿಗಳ ನಡುವೆ ಸಣ್ಣ ಮಟ್ಟದ ವಾಗ್ವಾದ ನಡೆದಿದೆ. ನಂತರ ವಾದವನ್ನು ನೋಡಿ ಚಂದನ್ ಬೆಂಬಲವಾಗಿ ಆಟೋರಿಕ್ಷಾ ಚಾಲಕರು ಮಧ್ಯ ಪ್ರವೇಶಿಸಿದ್ದಾರೆ. ನಂತರ ವಾಗ್ವಾದ ತಾರಕಕ್ಕೇರಿದ್ದು, ತಳ್ಳಾಟ ನೂಕಾಟ ನಡೆದಿದೆ. ಇನ್ನು ಘಟನೆಯ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.