ಪುತ್ತೂರು, ಮೇ.8(DaijiworldNews/AA): ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್(79) ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಸುಳ್ಯ ತಾಲೂಕಿನ ಪೆರುವಾಜೆಯ ಪುತ್ರಿಯ ಮನೆಯಲ್ಲಿ ಇದ್ದ ಪಾಲ್ತಾಡಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಹೀಗಾಗಿ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆಯೇ ನಿಧನರಾಗಿದ್ದಾರೆ.
ಪಾಲ್ತಾಡಿ ಅವರು ಮಕ್ಕಳ ಕವನ ಸಂಕಲನ, ಕಥಾ ಸಂಕಲನ, ಸಂವಹನ ಮಾಧ್ಯಮವಾಗಿ ಜಾನಪದ, ಜಾನಪದ ಪರಿಸರ, ಜಾನಪದ ವೈದ್ಯ, ಜಾನಪದ ಕುಣಿತ, ದೈವಾರಾಧನೆ, ತುಳುನಾಡಿನ ಸಮಗ್ರ ಪ್ರದರ್ಶನ ಕಲೆ ಮತ್ತು ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯ ಬರೆದಿದ್ದಾರೆ. ಪಾಲ್ತಾಡಿ ಅವರು ತುಳು ಅಕಾಡೆಮಿ ಅಧ್ಯಕ್ಷರಾಗಿ ತುಳು ಭಾಷೆಯ ಸರ್ವತೋಮುಖ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ತುಳುವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ತೃತೀಯ ಭಾಷೆಯನ್ನಾಗಿ ಬಳಸುವಲ್ಲಿ ಅವರು ಕಾರಣಕರ್ತರಾಗಿದ್ದಾರೆ.
ಇನ್ನು ಆಟಿ ಉತ್ಸವ, ಕೆಡ್ಡಸ ಕೂಟವನ್ನು ಸಾರ್ವಜನಿಕವಾಗಿ ಪರಿಚಯಿಸಿದ ಹಿರಿಮೆ ಪಾಲ್ತಾಡಿ ಅವರಿಗೆ ಸಲ್ಲುತ್ತದೆ. ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ತುಳು ಡಿಪ್ಲೊಮಾ ಕೋರ್ಸ್ಗಳಿಗೆ ಪಠ್ಯ ರಚನೆಕಾರರಾಗಿ ಅವರು ಕೆಲಸ ಮಾಡಿದ್ದಾರೆ. ಜೊತೆಗೆ ತುಳು ಭಾಷೆಯನ್ನು ಎಂಟನೇ ಪರಿಚ್ಛೇದ ಸೇರಿಸಬೇಕು ಎಂಬ ಆಗ್ರಹದಲ್ಲಿ ಮುಂಚೂಣಿಯಲ್ಲಿದ್ದರು. ಈ ಮೂಲಕ ತುಳು ಭಾಷೆಗಾಗಿ ಹಾಗೂ ತುಳು ನಾಡಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ.